ವಿಶ್ವಕರ್ಮರಿಂದ ವಾಸ್ತುಶಿಲ್ಪ ಪ್ರಾರಂಭ

UDP-17-VISHWA 2
Published on

ಉಡುಪಿ: ವಿಶ್ವಕರ್ಮರು ಪ್ರಾತಃಸ್ಮರಣೀಯರಾಗಿದ್ದು, ಅವರಿಂದಾಗಿಯೇ ವಿಶ್ವದಲ್ಲಿ ಕಲೆ ಮತ್ತು ವಾಸ್ತುಶಿಲ್ಪ ಆರಂಭಗೊಂಡಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಶನಿವಾರ ನಗರದ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಪುರಾಣಗಳಲ್ಲಿ ಉಲ್ಲೇಖಿಸಿದಂತೆ ದ್ವಾರಕ ನಗರ ಸಹಿತ ಪ್ರಸಿದ್ಧ ಕ್ಷೇತ್ರಗಳು, ವಾಸ್ತುಶಿಲ್ಪ ಕಲೆಗಳು, ವಿಶ್ವಕರ್ಮರಿಂದ ರಚಿತವಾಗಿವೆ. ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಇವರೇ ಮೂಲ ಪುರುಷರು. ವಿಶ್ವಕರ್ಮ ಸಮಾಜದವರು ಕಲೆಗೆ ಹೆಸರುವಾಸಿಯಾಗಿದ್ದು, ಕೆಲಸದ ನೈಪುಣ್ಯತೆಯಿಂದ ಕೆತ್ತಲ್ಪಟ್ಟ ಅತ್ಯುತ್ತಮ ಶಿಲ್ಪಕಲೆಗಳು ದೇಶದ ಆಸ್ತಿಯಾಗಿದೆ. ಜಿಲ್ಲೆಯಲ್ಲಿಯೂ ನವನವೀನ ವಿನ್ಯಾಸದ ಕಲ್ಲು ಕೆತ್ತನೆ ಹಾಗೂ ಮರದ ಕೆತ್ತನೆಯ ವಾಸ್ತು ಶಿಲ್ಪಗಳನ್ನು ಕೊಡುಗೆಯನ್ನಾಗಿ ನೀಡಿದ್ದಾರೆ ಎಂದರು.

ಕುತ್ಯಾರು ಆನೆಗುಂದಿ ಮಠದ ಮೌನೇಶ್ ಶರ್ಮ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ ಉದಯ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ ಉದ್ಯಾವರ, ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ರಾಜ್ಯ ಅಖಿಲ ಭಾರತ ವಿಶ್ವಕರ್ಮ ಮಹಾ ಸಭಾಧ್ಯಕ್ಷ ನೆರಂಬಳ್ಳಿ ರಮೇಶ್ ಆಚಾರ್ಯ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಹರೀಶ್ ಉಪ್ಪೂರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net