ವಿಶ್ವಕರ್ಮರಿಂದ ಸುಂದರ ಸಮಾಜ ನಿರ್ಮಾಣ

udp-17-vishwakarma
Published on

ಉಡುಪಿ: ಸುಂದರ ಸಮಾಜ ನಿಮಾರ್ಣ ಮಾಡುವಲ್ಲಿ ವಿಶ್ವಕರ್ಮರ ಪಾತ್ರ ಮಹತ್ವದ್ದಾಗಿದೆ. ವಿಶ್ವಕರ್ಮ ಸಮಾಜದ ವಾಸ್ತುಶಿಲ್ಪ ರಚನಾ ಶೈಲಿ ಪ್ರತಿಯೊಬ್ಬರನ್ನು ಬೆರಗುಗೊಳಿಸುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಹೇಳಿದರು.

ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಮರಗೆಲಸ, ಕಬ್ಬಿಣದ ಕೆಲಸ, ಚಿನ್ನ-ಬೆಳ್ಳಿ ತಯಾರಕರು, ಶಿಲ್ಪಕಲಾ, ಕಂಚು ಹಿತ್ತಾಳೆ ನಿರ್ವಹಿಸುವವರಿಗೆ ಮೂಲ ಪುರುಷ ವಿಶ್ವಕರ್ಮ. ದ್ವಾಪರ ಯುಗದಲ್ಲಿ ದ್ವಾರಕೆಯನ್ನು, ತ್ರೇತಾಯುಗದಲ್ಲಿ ಸುವರ್ಣ ಲಂಕೆಯನ್ನು, ಸತ್ಯಾ ಯುಗದಲ್ಲಿ ಸ್ವರ್ಗ ನಗರವನ್ನು ಹಾಗೂ ಕಲಿಯುಗದಲ್ಲಿ ಹಸ್ತಿನಾಪುರ ಮತ್ತು ಇಂದ್ರಪ್ರಸ್ಥವನ್ನು ವಿಶ್ವಕರ್ಮ ಸ್ಥಾಪಿಸಿರುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದರು. ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದ್ದು, ಇದು ಕೋಟ್ಯಾಂತರ ಜನರ ಜೀವನಕ್ಕೆ ದಾರಿದೀಪವಾಗಿದೆ. ಸಮುದಾಯದ ಜನರನ್ನು ಹೆಚ್ಚು ಫಲಾನುಭವಿಗಳಾನ್ನಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಸಮುದಾಯ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅಜಂತಾ, ಎಲ್ಲೋರ, ಐಹೊಳೆ, ಹಂಪಿ, ಬೇಲೂರು-ಹಳೆಬೀಡು, ಜಕಣಾಚಾರ್ಯರು ಶ್ರವಣಬೆಳಗೊಳದಲ್ಲಿ ನಿರ್ಮಿಸಿದ ಬಾಹುಬಲಿ ಮೂರ್ತಿಯು ವಿಶ್ವಕರ್ಮರ ಕೈಚಳಕಕ್ಕೆ ಉದಾಹರಣೆಯಾಗಿದೆ. ವಿಶ್ವಕರ್ಮ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಮುಖ್ಯವಾಗಿ ಹೆಣ್ಣು ಮಕ್ಕಳು ಸಹ ಉನ್ನತ ಶಿಕ್ಷಣ ಪಡೆಯಬೇಕು ಎಂದರು.

ಮಣಿಪಾಲದ ಮಾಹೆಯ ಡಾ.ಪ್ರತಿಮಾ ಜಯಪ್ರಕಾಶ್​ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಸಾಧನೆಗೈದ ವಿಶ್ವಕರ್ಮ ಸಮಾಜದ ಐದು ಹಿರಿಯರನ್ನು ಸನ್ಮಾನಿಸಲಾಯಿತು. ದ.ಕ ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮುಲ್ಕಿ, ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಕೆ.ವೆಂಕಟೇಶ್​ ಆಚಾರ್ಯ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಅನಂತಯ್ಯ ಆಚಾರ್ಯ ನಿರೂಪಿಸಿ, ರತ್ನಾಕರ ಆಚಾರ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net