ಕಲೆ, ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

oplus_4194304
ಆಲೂರು ಪಟ್ಟಣದ ಮಿನಿ ವಿಧಾನಸೌಧ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
Published on

ಆಲೂರು: ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿ, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವ ಇಂದಿಗೂ ಉಳಿದಿದೆ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದರು.

ವಿಶ್ವಕರ್ಮ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಶಂಕರಾಚಾರ್ಯ ಮಾತನಾಡಿ, ವಿಶ್ವ ಸುಂದರವಾಗಿ ಕಾಣಲು ವಿಶ್ವಕರ್ಮ ಜನಾಂಗದ ಶ್ರಮ ಸಾಕಷ್ಟಿದ್ದು, ರೈತನಿಂದ ಸೈನಿಕನವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ ವಿಶ್ವಕರ್ಮ ಜನಾಂಗದ ಶ್ರಮ ಅಡಗಿದೆ. ದೇವರು, ದೇವಾಲಯಗಳ ಕೆತ್ತನೆಯಲ್ಲೂ ಜನಾಂಗದವರ ಪಾತ್ರವಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ದೇವಸ್ಥಾನಗಳ ಸೌಂದರ್ಯ ಹಾಗೂ ಚಿನ್ನ ಬೆಳ್ಳಿ ಆಭರಣಗಳಲ್ಲೂ ವಿಶ್ವಕರ್ಮ ಜನಾಂಗದ ಶ್ರಮ ಅಡಗಿದೆ. ವಿಶ್ವಕರ್ಮರೇ ಸನಾತನ ಸಂಸ್ಕೃತಿಯ ಮೂಲವಾಗಿದ್ದಾರೆ. ಜಾತಿ ಜನಗಣತಿಯ ಸಂದರ್ಭದಲ್ಲಿ ನಮ್ಮ ಸಮಾಜದ ಬಾಂಧವರು ತಪ್ಪದೆ ವಿಶ್ವಕರ್ಮ ಎಂದೇ ಬರೆಸಬೇಕು ಎಂದು ಮನವಿ ಮಾಡಿಕೊಂಡರು.

ತಾಲೂಕು ಅಧ್ಯಕ್ಷ ಎಂ.ಪಿ ಹರೀಶ್ ಮಾತನಾಡಿ, ಕಾಡಿನಲ್ಲಿನ ಕಲ್ಲಿಗೆ ದೇವರ ರೂಪ ನೀಡಿ, ಜನಮನದಲ್ಲಿ ಶ್ರದ್ಧಾಭಾವ ತುಂಬುವ ಕೆಲಸವನ್ನು ವಿಶ್ವಕರ್ಮ ಜನಾಂಗದವರು ಮಾಡುತ್ತಾರೆ ಎಂದು ತಿಳಿಸಿದರು.

ತಾಲೂಕು ಯುವ ಘಟಕದ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ, ವಿಶ್ವಕರ್ಮರ ಕೆತ್ತನೆ ಕಾರ್ಯಗಳ ಕಲೆಯು ಇಂದಿನ ಸಮಾಜಕ್ಕೆ ಕೊಡುಗೆ ನೀಡಿರುವುದನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಅಮರ ಶಿಲ್ಪಿ ಜಕ್ಕಣಾಚಾರಿ ಅವರು ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಅಂಕೇಗೌಡ, ಸಂಘದ ಗೌರವಾಧ್ಯಕ್ಷ ಬಿ.ವೈ ಮಧುಕುಮಾರ್, ಉಪಾಧ್ಯಕ್ಷ ಎಂ.ಡಿ ಪ್ರದೀಪ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಖಜಾಂಚಿ ಮಿಥುನ್, ಸಹ ಕಾರ್ಯದರ್ಶಿ ಪವನ್ ಕುಮಾರ್, ನಿರ್ದೇಶಕರಾದ ಜಿತೇಂದ್ರ,ಪರಮೇಶ್, ದುರ್ಗಾಪ್ರಸಾದ್, ಹೇಮಂತ್, ರವಿಕುಮಾರ್, ಕೋಮರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net