ವಿಶ್ವಕರ್ಮ ಸಮುದಾಯದವರು ಶ್ರಮಿಕರು ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಶಾಸಕ ವೇದವ್ಯಾಸ ಕಾಮತ್ ಅಭಿಮತ

mng-sep17-vishwakarma2
Published on

ಮಂಗಳೂರು: ಶಿಲ್ಪದಲ್ಲಿ ಕಲೆ ಅರಳಿಸುವ ವಿಶ್ವಕರ್ಮ ಸಮುದಾಯದವರ ಕೆಲಸಗಳು ಭಾರತವನ್ನು ವಿಶ್ವದೆಲ್ಲಡೆ ಆಕರ್ಷಿಸುತ್ತದೆ ಎಂದು ಶಾಸಕರಾದ ಡಿ.ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಥಬೀದಿಯಲ್ಲಿರುವ ಕಾಳಿಕಾಂಬ ವಿನಾಯಕ ದೇವಸ್ಥಾನದ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.


ಪುರಾಣದಲ್ಲಿ ಉಲ್ಲೇಖವಾಗಿರುವ ಹಲವು ನಗರಗಳ ನಿರ್ಮಾಣ ಸೇರಿದಂತೆ ದೇಶದ ಅಪೂರ್ವ ಶಿಲ್ಪ ಕಲೆಗಳಿಗೆ ವಿಶ್ವಕರ್ಮ ಸಮುದಾಯದ ಕೊಡುಗೆಗಳು ಅಪಾರ. ಆ ಸಮುದಾಯದ ಮೂಲವೃತ್ತಿ ನಶಿಸಿ ಹೋಗಬಾರದು. ಆಧುನಿಕತೆಗೆ ತಕ್ಕಂತೆ ಒಗ್ಗಿಕೊಂಡು ಯಂತ್ರಗಳ ಮೂಲಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಸಮುದಾಯದವರು, ಇತ್ತೀಚೆಗೆ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಾಡಿದ ಶಿಲ್ಪಕಲೆಗಳ ಕೆತ್ತನೆ ಕೆಲಸ ಕಾರ್ಯಗಳು ಭಕ್ತರು ಹಾಗೂ ಪ್ರವಾಸಿಗರನ್ನು ಸೆಳೆದಿವೆ, ಇತರರಿಗೆ ಹೋಲಿಕೆ ಮಾಡಿದರೆ ವಿಶ್ವಕರ್ಮ ಸಮುದಾಯದವರು ಬಹಳ ಶ್ರಮಿಕರು, ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುತ್ತಾರೆ ಎಂದರು.


ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ತಹಶೀಲ್ದಾರ್ ಪುರಂದರ, ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವಾಚಾರ್ಯ, ಎರಡನೇ ಮೊಕ್ತೇಸರ ಸುಂದರಾಚಾರ್ಯ, ಮೂರನೇ ಮೊಕ್ತೇಸರ ಲೋಕೇಶ್ ಆಚಾರ್ಯ ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು.
ಬೇಲೂರಿನ ವೇದ ಹಾಗೂ ಸಂಸ್ಕೃತ ಶಿಕ್ಷಕರರಾದ ವಿಶ್ವನಾಥ ಶರ್ಮ ವಿಶ್ವಕರ್ಮ ಜಯಂತಿಯ ಸಂದೇಶ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net