

ಚಿತ್ರದುರ್ಗ: ವಿಶ್ವದ ಪ್ರತಿ ಆಕೃತಿಗೂ ಜೀವ ಕಳೆ ತುಂಬಿದ ಶ್ರೇಯಸ್ಸು, ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ. ಜಗತ್ತಿಗೆ ಅವರು ನೀಡಿದ ಕೊಡುಗೆ ಅಪಾರ ಎಂದು ಎಂಎಲ್ಸಿ ಕೆ.ಎಸ್.ನವೀನ್ ಬಣ್ಣಿಸಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ತರಾಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದೇಶ-ವಿದೇಶ ಸೇರಿ ವಿಶ್ವದ ಯಾವುದೇ ಮೂಲೆಯಲ್ಲಾಗಲಿ ಕೆತ್ತನೆ ಮೂಲಕ ಸುಂದರವಾಗಿ ಹೊರಹೊಮ್ಮುವ ಆಕೃತಿಗಳು ವಿಶ್ವಕರ್ಮರ ಕೈಚಳಕ, ನೈಪುಣ್ಯತೆಯಿಂದ ಮೂಡಿಬಂದಿವೆ. ಈ ಸಮುದಾಯದ ಬೆಂಬಲ, ಕರಕುಶತೆ, ಪಾಲುಗಾರಿಕೆ ಇಲ್ಲದೆಯೆ ರೈತ, ಉದ್ಯಮಿ ಸೇರಿ ಯಾರ ಬದುಕು ನಡೆಯುವುದಿಲ್ಲ. ಭಾರತೀಯ ಕಲೆ, ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕರ್ಮರ ಸಂಪೂರ್ಣ ಉನ್ನತಿಗಾಗಿ ಕೌಶಲ ತರಬೇತಿ, ಉದ್ಯಮ ಪ್ರಾರಂಭಕ್ಕೆ ಬೇಕಾಗುವ ಸಾಲ, ಸಾಂಪ್ರಾದಾಯಿಕ ವೃತ್ತಿಗಳನ್ನು ಉಳಿಸಿ, ಬೆಳೆಸಲು ವಿವಿಧ ರೀತಿಯ ಸೌಲಭ್ಯ ನೀಡುವಂತ ಹೊಸ ಯೋಜನೆ ರೂಪಿಸಿರುವುದು ಸಂತಸದ ಸಂಗತಿ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ವಿಶ್ವಕರ್ಮ ಸಮುದಾಯ ಶ್ರಮ, ಕೌಶಲ ಎರಡರಿಂದಲೂ ಖ್ಯಾತಿ ಗಳಿಸಿದೆ. ದೇಶದ ವಾಸ್ತುಶಿಲ್ಪ ಕಲೆಗೂ ಅಪಾರ ಕೊಡುಗೆ ನೀಡಿದೆ. ದೇಶಕ್ಕೆ ಅನ್ನದಾತರಂತೆ ರೈತರಿಗೆ ಈ ಸಮಾಜ ಬೆನ್ನೆಲುಬಾಗಿದೆ ಎಂದು ಅಭಿಪ್ರಾಯಪಟ್ಟರು.
ಹೊಯ್ಸಳ ಶಿಲ್ಪಕಲಾ ಕುಟೀರ ಅಧ್ಯಕ್ಷ ಎಸ್.ಮಂಜುನಾಥಾಚಾರ್ಯ ಮಾತನಾಡಿ, ವಿಶ್ವಕರ್ಮ ಇಡೀ ಭೂಮಂಡಲವನ್ನು ನಿರ್ಮಿಸಿದ ಸೃಷ್ಟಿಕರ್ತ. ಹೀಗಾಗಿ ಅವರಿಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದರು.
ರಾಜ್ಯ ವಿಶ್ವ ಬ್ರಾಹ್ಮಣ ಮಠಾಧೀಪತಿಗಳ ಮತ್ತು ಪೀಠಾಧಿಪತಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ರಾಮಚಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಕೆ.ಟಿ.ಸುರೇಶಾಚಾರ್, ಎ.ಶಂಕರಾಚಾರ್, ಉಪಾಧ್ಯಕ್ಷರಾದ ಕೃಷ್ಣಾಚಾರ್, ಮಲ್ಲಿನಾಥಾಚಾರ್, ಬಾಲಬ್ರಹ್ಮಾಚಾರ್, ಕಾರ್ಯದರ್ಶಿ ಕೆ.ಶಿವಣ್ಣಾಚಾರ್, ಪ್ರಧಾನ ಕಾರ್ಯದರ್ಶಿ ಎ.ಗೋವರ್ಧನ, ಮಹಿಳಾ ಘಟಕದ ಅಧ್ಯಕ್ಷೆ ವಿಜಯ ನಾಗೇಂದ್ರಾಚಾರ್, ಮುಖಂಡರಾದ ಪ್ರಸನ್ನಾಚಾರ್, ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇತರರಿದ್ದರು.
ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ: ಜಯಂತಿ ಅಂಗವಾಗಿ ಬುರುಜನಹಟ್ಟಿಯ ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಆರಂಭವಾದ ವಿಶ್ವಕರ್ಮರ ಭಾವಚಿತ್ರ ಮೆರವಣೆಗೆಗೆ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು. ನಾದಸ್ವರ, ಡೊಳ್ಳು ಸೇರಿ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು. ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದ ನಂತರ ತರಾಸು ರಂಗಮಂದಿರ ತಲುಪಿತು. ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಇದ್ದರು.