ವಿಶ್ವಭಾರತಿ ಪ್ರೌಢಶಾಲೆ ಸುವರ್ಣ ಮಹೋತ್ಸವ 11ರಂದು

IMG_20250208_110154_873-2.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಕ್ರಾಸ್ ಬಳಿಯ ವೇಮನ ವಿದ್ಯಾವರ್ಧಕ ಸಂಘದ ವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಫೆ. 11ರಂದು ಸಂಜೆ 4ಕ್ಕೆ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ರಮೇಶ ಜಂಗಲ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಡಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಹಾಸ್ಯ ಸಾಹಿತಿ ಅನಿಲ ವೈದ್ಯ ಉಪನ್ಯಾಸ ನೀಡುವರು. ಸಹಕಾರ ರತ್ನ ಪುರಸ್ಕೃತ ಕೆ.ಎಲ್. ಪಾಟೀಲ ಅವರನ್ನು ಸನ್ಮಾನಿಸಲಾಗುವುದು.

ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಸುವರ್ಣ ಮಹೋತ್ಸವಕ್ಕೆ ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಹಳೇ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದರು.

1956ರಲ್ಲಿ ವೇಮನ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿದೆ. ಗ್ರಾಮೀಣ ಭಾಗದವರು, ಹಿಂದುಳಿದ, ಬಡ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಸಂಘದ ವತಿಯಿಂದ ಹುಬ್ಬಳ್ಳಿಯಲ್ಲಿ ವಿಶ್ವಭಾರತಿ, ಧಾರವಾಡದಲ್ಲಿ ಶಾರದಾ ಪ್ರೌಢಶಾಲೆ ಆರಂಭಿಸಲಾಯಿತು ಎಂದು ಜಂಗಲ ಅವರು ವಿವರಿಸಿದರು.

ವೇಮನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ 13 ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆಯಲ್ಲಿ 120, ಪಿಯು ವಿಭಾಗದಲ್ಲಿ 106 ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರಾಥಮಿಕ ಶಾಲೆ, ಪ್ಯಾರಾ ಮೆಡಿಕಲ್ ಕಾಲೇಜು, ನೃಪತುಂಗ ಬೆಟ್ಟ ಬಳಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಆರಂಭಿಸುವ ಯೋಚನೆ ಇದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವಿ.ಆರ್. ಹೊಸಮನಿ, ವೆಂಕರಡ್ಡಿ ಕಿರೇಸೂರ, ಕೆ.ವಿ. ಹುಲಕೋಟಿ, ಸುಜಾತಾ ಬಾಬುರಡ್ಡಿ, ಎಚ್.ಪಿ. ಯಡಹಳ್ಳಿ, ವನಮಾಲಾ ಬಣವಿ, ಅಶೋಕ ಸೋಮಾಪುರ, ಆರ್.ವೈ. ಗುಡರಡ್ಡಿ, ಮಹೇಶ ಪಾಟೀಲ, ಪ್ರಕಾಶ ಹನಮರಡ್ಡಿ, ಉದಯ ಹೊಸಮನಿ, ಉಮೇಶ ಬಳಿಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net