

ಹುಬ್ಬಳ್ಳಿ: ಶ್ರೀ ಸಿದ್ಧಾರೂಢರ 190ನೇ ಹಾಗೂ ಶ್ರೀ ಗುರುನಾಥಾರೂಢರ 115ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಹಾಗೂ 2025ನೇ ಸಾಲಿನ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮ ಫೆ. 19ರಿಂದ 27ರವರೆಗೆ ಏರ್ಪಡಿಸಲಾಗಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ವಿಶ್ವವೇದಾಂತ ಪರಿಷತ್ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 19ರಂದು ಬೆಳಗ್ಗೆ 9ಕ್ಕೆ ಶ್ರೀ ಸಿದ್ಧಾರೂಢರ ಕಥಾಮೃತದ ಶೋಭಾಯಾತ್ರೆ ನಡೆಯಲಿದೆ. ಫೆ. 20ರಂದು ಬೆಳಗ್ಗೆ 9.30ಕ್ಕೆ ವಿಶ್ವಶಾಂತಿಗಾಗಿ ವಿಶ್ವವೇದಾಂತ ಪರಿಷತ್ ಪ್ರಾರಂಭೋತ್ಸವ ನಡೆಯಲಿದ್ದು, ಹರಿದ್ವಾರದ ಶ್ರೀ ಪತಂಜಲಿಯೋಗಪೀಠದ ಶ್ರೀ ಸ್ವಾಮಿ ಬಾಬಾ ರಾಮದೇವ್, ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇತರರು ಭಾಗವಹಿಸುವರು. 54 ಪುಸ್ತಕಗಳ ಲೋಕಾರ್ಪಣೆ ಜರುಗಲಿದೆ ಎಂದರು.
26ರವರೆಗೆ ನಿತ್ಯವೂ ಕಾರ್ಯಕ್ರಮ ನಡೆಯಲಿದ್ದು, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ, ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು, ಇಂಚಲದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ, ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ 150ಕ್ಕೂ ಹೆಚ್ಚು ವಿವಿಧ ಮಠಾಧೀಶರು ಭಾಗವಹಿಸುವರು. 27ರಂದು ಬೆಳಗ್ಗೆ 9ಕ್ಕೆ ದಾನಿಗಳು, ಸೇವಾದಾರಿಗಳು, ಗಣ್ಯರು ಹಾಗೂ ಮಾಜಿ ಧರ್ಮದರ್ಶಿಗಳನ್ನು ಸನ್ಮಾನಿಸಲಾಗುವುದು ಎಂದರು.
ಶ್ರೀಮಠದ ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಟ್ರಸ್ಟಿಗಳಾದ ಡಾ. ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ವಸಂತ ಸಾಲಗಟ್ಟಿ, ಗೀತಾ ಕಲಬುರ್ಗಿ, ಶಾಂತರಾಜ ಪೋಳ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ರಥೋತ್ಸವ 27ರಂದು: ಮಹಾಶಿವರಾತ್ರಿ ನಿಮಿತ್ತ ಪ್ರತಿ ನಿತ್ಯ ಬೆಳಗ್ಗೆ 7.45ಕ್ಕೆ ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪಠಣ, 9ಕ್ಕೆ ಮಹಾತ್ಮರು, ಪಂಡಿತರಿಂದ ವೇದಾಂತ ಉಪನ್ಯಾಸ ಜರುಗಲಿವೆ. ಸಂಜೆ 5ಕ್ಕೆ ಕೀರ್ತನೆ ನಡೆದು ಮಹಾಪೂಜೆ ನಡೆಯಲಿದೆ. 26ರಂದು ಶಿವರಾತ್ರಿ ಜಾಗರಣೆ ನಿಮಿತ್ತ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಗಣೇಶಪೇಟೆಯಲ್ಲಿರುವ ಶ್ರೀ ಜಡಿಸ್ವಾಮಿ ಮಠಕ್ಕೆ ತೆರಳಿ ಮರಳಿ ಶ್ರೀಮಠ ತಲುಪಲಿದೆ. 27ರಂದು ಪಲ್ಲಕ್ಕಿ ಉತ್ಸವ ನಂತರ ಸಂಜೆ 5.30ಕ್ಕೆ ಸಿದ್ಧಾರೂಢರ ರಥೋತ್ಸವ ಜರುಗಲಿದೆ. 28ರಂದು ಬೆಳಗ್ಗೆ 5ರಿಂದ 6ರವರೆಗೆ ಭಸ್ಮ ಸ್ನಾನ, ಮಾ. 1ರಂದು ಸಂಜೆ 6.30ಕ್ಕೆ ಕೌದಿ ಪೂಜೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್ ತಿಳಿಸಿದರು.