

ಬೆಂಗಳೂರು: ಕೆಲಸದ ಒತ್ತಡವಿದ್ದರೂ ಸಂಗೀತ ಮತ್ತಿತರ ಕಲೆಗಳತ್ತ ಜನರು ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಹಾರ್ಮೋನಿಯಂ (ಸಂವಾದಿನಿ) ವಾದಕ ಪಂಡಿತ್ ರಾಮಭಾವು ಬಿಜಾಪುರೆ ಸ್ಮರಣಾರ್ಥ ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್ ಮಲ್ಲೇಶ್ವರದ ಸೇವಾ ಸದನದಲ್ಲಿ ಆಯೋ ಜಿಸಿರುವ ಮೂರು ದಿನಗಳ ‘ವಿಶ್ವ ಸಂವಾದಿನಿ ಶೃಂಗ’ಕ್ಕೆ ಶುಕ್ರ ವಾರ ಚಾಲನೆ ನೀಡಿ ಮಾತನಾಡಿದರು.
ಹಾರ್ಮೋನಿಯಂ ನ ವಿವಿಧ ಪ್ರಯೋಗಗಳಿಗೆ ಕಾರ್ಯಕ್ರಮ ಸಾಕ್ಷಿ ಯಾಯಿತು. ಮೊದಲಿಗೆ ಪ್ರವೀಣ್ ಡಿ. ರಾವ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ಹಾರ್ಮೋನಿಯಂ ವಾದಕ ಮಿಲಿಂದ್ ಕುಲಕರ್ಣಿ ಹಾಗೂ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಜುಗಲ್ಬಂದಿ ನಡೆಯಿತು. ರೇವಯ್ಯ ವಸ್ತ್ರದಮಠ ಏಕವ್ಯಕ್ತಿ ಹಾಮೋನಿಯಂ ಕಛೇರಿ ಪ್ರಸ್ತುತಪಡಿಸಿದರು. ‘ಹಾರ್ಮೋನಿಯಂನ ಉಗಮ ಹಾಗೂ ಬೆಳವಣಿಗೆ’ ಕುರಿತು ಆದಿತ್ಯ ಮಾಹಿತಿ ನೀಡಿದರು. ಶ್ರೀ ರಾಮಕೃಷ್ಣ ವಿದ್ಯಾರ್ಥಿ ಮಂದಿರದ ಸ್ವಾಮಿ ತದ್ಯುಕ್ತಾನಂದಜೀ ಪಾಲ್ಗೊಂಡಿದ್ದರು.
*******
ಸಂವಾದಿನಿ ಸಂತ: ಹಾರ್ಮೋನಿಯಂ ಎಂದಾಕ್ಷಣ ನೆನಪಾಗುವ ಹೆಸರು ಪಂಡಿತ ರಾಮಭಾವು ಬಿಜಾಪುರೆ ಅವರದು. ಅವರು ತಮ್ಮ ಇಡೀ ಜೀವನವನ್ನು ಹಾಮೋನಿಯಂ ವಾದನಕ್ಕಾಗಿ ಮುಡಿಪಾಗಿಟ್ಟ ವರು. ಈ ವಾದ್ಯ ವಾದನದಲ್ಲಿ ತಮ್ಮದೇ ಆದ ಹೊಸ ಶೈಲಿಯನ್ನು ಸೃಷ್ಟಿಸಿದವರು. 2010ರಲ್ಲಿ ಈ ನಾದಜ್ಯೋತಿಯು ಅನಂತದಲ್ಲಿ ಲೀನವಾದರೂ, ಅದರ ಪ್ರಭಾವಲಯವಿನ್ನೂ ಚೈತನ್ಯಪೂರ್ಣವಾಗಿ ಬೆಳಗುತ್ತಿದೆ.
94 ವರ್ಷಗಳ ತಮ್ಮ ಸುದೀರ್ಘ ಸಾಂಗೀತಿಕ ಪಯಣದಲ್ಲಿ ಅನೇಕ ಸಾಧಕರನ್ನು ತಪಸ್ವಿಗಳನ್ನು, ಪ್ರೋತ್ಸಾಹಕರನ್ನು ಹತ್ತಿರದಿಂದ ಕಂಡವರು ಪಂಡಿತ ರಾಮಭಾವು. ಹಲವು ಏರಿಳಿತಗಳನ್ನು, ಅವಮಾನ- ಸನ್ಮಾನಗಳನ್ನು ಅನುಭವಿಸಿದವರು. ಇಂತಹ ಪ್ರಾತಃಸ್ಮರಣೀಯ ಗುರುಗಳೊಂದಿಗೆ 34 ವರ್ಷಗಳ ಸಹವಾಸ, ಮಾರ್ಗದರ್ಶನ ಲಭಿಸಿದ್ದು ನನ್ನ ಪೂರ್ವಜನ್ಮದ ಸುಕೃತ. ಹಾರ್ವೇನಿಯಂ ಮೇಲೆ ಕೈ ಇಡುವುದರಿಂದ ಮೊದಲು ಮಾಡಿ ಅವರಿಂದ ನಾನು ಕಲಿತದ್ದು ಬಹಳಷ್ಟಿದೆ. ಸಂಗೀತದ ಶ್ರೀಗಣೇಶದಿಂದ ಹಿಡಿದು ಪ್ರಗಲ್ಭ ಚಿಂತನೆಗಳವರೆಗೆ ಕೈಹಿಡಿದು ಕರೆದುಕೊಂಡು ಹೋದರು. ರಾಗ- ರಾಗಿಣಿಗಳಲ್ಲದೆ, ಸ್ವರ-ಲಯ-ತಾಳಗಳಲ್ಲದೆ, ಚೀಜ್-ಬಂದೀಷ್ಗಳಲ್ಲದೆ, ಸಂಗೀತವನ್ನು ನೋಡುವ ದೃಷ್ಟಿ, ಅನುಭವಿಸುವ ಮನಸ್ಸು ಹಾಗೂ ಅಂತರಾತ್ಮವನ್ನು ತಟ್ಟುವ ಅಭಿವ್ಯಕ್ತಿಯ ಪರಿ ಹೇಳಿಕೊಟ್ಟರು. ಸಾಧಿಸಲು ಅವರು ಕೊಟ್ಟ ಪ್ರೇರಣೆ ನಮ್ಮಸಾಂಗೀತಿಕ ಬದುಕಿಗೆ ದಾರಿದೀಪ.
ಡಾ. ರವೀಂದ್ರ ಕಾಟೋಟಿ