ವಿಶ್ವ ಮಾನವ ಸಂದೇಶ ವಿಶ್ವಕ್ಕೆ ಮಾದರಿ: ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್ ಅಭಿಮತ

2
Published on

ಮೈಸೂರು: ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಘದಿಂದ ಜಯನಗರದಲ್ಲಿರುವ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ಕುವೆಂಪು ರಚಿತ ಕವನ ಗಾಯನ ಸ್ಪರ್ಧೆ, ಕುವೆಂಪು ಅವರ ಬದುಕು, ಬರಹ ಆಧಾರಿತ ಕವನ ರಚನೆ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್ ಮಾತನಾಡಿ, ನಮ್ಮ ನಡುವಿನ ಆದರ್ಶಪ್ರಾಯ ವ್ಯಕ್ತಿಯಾಗಿ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಕುವೆಂಪು ಅವರ ವಿಶ್ವ ಮಾನವ ಸಂದೇಶ ಇಡೀ ವಿಶ್ವಕ್ಕೆ ಮಾದರಿ ಹಾಗೂ ಪ್ರಸ್ತುತವಾಗಿದೆ. ಕುವೆಂಪು ಅವರು ತಮ್ಮ ಮನದ ಭಾವನೆಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ ನೇರವಾಗಿ ಹೇಳುವ ಧೈರ್ಯವನ್ನು ಹೊಂದಿದ್ದರು. ಯಾವುದೇ ಭೀತಿ ಇಲ್ಲದೇ ಮೌಢ್ಯ, ಕಂದಾಚಾರಗಳ ವಿರುದ್ಧ ತಮ್ಮ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು ಎಂದರು.
ಚಲನಚಿತ್ರ ಸಂಗೀತ ನಿರ್ದೇಶಕ ರಾಮಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈಸೂರು ವಿವಿ ಲಲಿತಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂಗೀತ ವಿದ್ವಾನ್ ಆರ್.ರಘು , ವಸಂತಮಹಲ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಬೋಧಕ ಡಾ. ಶ್ಯಾಮೇಶ್ ಅತ್ತಿಗುಪ್ಪೆ, ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜೆ. ಶೋಭಾ ರಮೇಶ್ ಇತರರು ಇದ್ದರು.
10 ವರ್ಷಕ್ಕಿಂತ ಕೆಳಪಟ್ಟವರು, 11ರಿಂದ 13 ವರ್ಷ, 14 ರಿಂದ 16 ವರ್ಷ, 17 ರಿಂದ 21 ವರ್ಷ ಹಾಗೂ 21 ವರ್ಷ ಮೇಲ್ಪಟ್ಟ ವಯೋಮಿತಿಯ ಐದು ವಿಭಾಗದಲ್ಲಿ ಸ್ಪರ್ಧೆ ನಡೆಸಲಾಯಿತು. ಗಾಯನ ಮತ್ತು ಕವನ ರಚನಾ ಸ್ಪರ್ಧೆ ವಿಜೇತರಿಗೆ ನಗರದ ಜಯಲಕ್ಷ್ಮೀಪುರಂನಲ್ಲಿರುವ ಕುವೆಂಪು ಅವರ ‘ಉದಯರವಿ’ ನಿವಾಸಲ್ಲಿ ಜ.6ರಂದು ಬಹುಮಾನ ವಿತರಣೆ, ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net