

ಬೆಂಗಳೂರು: ಬೆಂಗಳೂರು ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸಿರುವ ನೀಲಕಂಠ ಆರ್.ಗೌಡ ಅವರಿಗೆ ವಿಶ್ವ ಕನ್ನಡ ಕಲಾ ಕೂಟ ಹಾಗೂ ಸಮಾನ ಮನಸ್ಕರರ ವೇದಿಕೆ ಬೆಂಬಲ ಸೂಚಿಸಿದೆ.
ಮೇ.3 ರಂದು ನಡೆಯಲಿರುವ ಬೆಂಗಳೂರು ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ನೀಲಕಂಠ ಆರ್.ಗೌಡ ಈಗಾಗಲೇ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಬಡವರು, ಹಿಂದುಳಿದ ವರ್ಗಗಗಳ ಯೋಗಕ್ಷೇಮ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯ ಸೇವೆಯಲ್ಲಿ ಮಹತ್ತರ ಸಾಧನೆ ಮಾಡಿರುವ ಇವರಿಗೆ ವಿಶ್ವ ಕನ್ನಡ ಕಲಾ ಕೂಟ ಬೆಂಬಲವಾಗಿ ನಿಂತಿದೆ ಎಂದು ಕೂಟದ ಅಧ್ಯಕ್ಷ ಬಿ.ಎನ್.ಸುರೇಶ್ ಬಾಬು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದವೀಧರ ಹಾಗೂ ಶಿಕ್ಷಕರ ಏಳಿಗೆ ನೀಲಕಂಠ ಆರ್.ಗೌಡರ ಧ್ಯೆಯವಾಗಿದೆ. ಸದ್ಯ ಅವರು ಹಲವು ಗ್ಯಾರೆಂಟಿಗಳಿಗೆ ಭದ್ಧರಾಗಿದ್ದಾರೆ.ಭ್ರಷ್ಟಾಚಾರ,ಅಧಿಕಾರ ದುರುಪಯೋಗ, ಸ್ವಾರ್ಥರಾಜಕಾರಣ ಮಾಡುವುದಿಲ್ಲ. ವಿಶೇಷವಾಗಿ ಪದವೀಧರರ ಶಿಕ್ಷಣ ಕ್ಷೇತ್ರದಲ್ಲಿರುವ ತಾರತಮ್ಯದ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದಾರೆ. 2008 ರಿಂದ 2013 ರವರೆಗೆ ರಾಜ್ಯ ಒಕ್ಕಲಿಗರ ಸಂಘದಲ್ಲಿ ಚುನಾಯಿತ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಅನೇಕ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಯಾವುದೇ ಪಕ್ಷಕ್ಕೆ ಸೀಮಿತವಾಗದ ಇವರು ಸ್ವತಂತ್ರ ಸಿದ್ಧಾಂತದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿತ್ವ ಹೊಂದಿರುವ ನೀಲಕಂಠ ಆರ್.ಗೌಡ ಅವರನ್ನು ಈ ಬಾರಿ ಪದವೀಧರರು ಕೈ ಹಿಡಿರುವ ಮೂಲಕ ಜಯಶೀಲರನ್ನಾಗಿಸಬೇಕು ಎಂದು ಮನವಿ ಮಾಡಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಚನ್ನಪ್ಪಗೌಡ ನಲ್ಲೂರು ಮಾತನಾಡಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನ ಆಶಯಗಳಿಗೆ ಪೂರಕವಾಗಿ, ಪಾರದರ್ಶಕವಾಗಿ ಹಾಗೂ ರೈತರ ಮತ್ತು ಧ್ವನಿ ಇಲ್ಲದವರ ಪರ ಕೆಲಸ ಮಾಡಬೇಕೆಂಬ ಗುರಿ ಮತ್ತು ಧ್ಯೇಯ ಹೊಂದಿದ್ದಾರೆ. ಕೊಡಗಿನಲ್ಲಿ ಪರಿಸರ ವಿಕೋಪವಾದಾಗ ಸಂತ್ರಸ್ತೆಯರಿಗೆ, ಕರೋನಾ ಸಂಕಷ್ಟದಲ್ಲಿ ನಲುಗಿದ್ದ ಅನೇಕ ಕಲಾವಿದರಿಗೆ ವಿವಿಧ ಮೂಲಗಳಿಂದ ದೇಣಿಗೆ ಸಂಗ್ರಹಿಸಿ ಅವರ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರಜಿಲ್ಲೆಯ ಮಾಜಿ ಅಧ್ಯಕ್ಷ ಟಿ.ತಿಮ್ಮೇಶ್, ಶಾಶ್ವತ ನೀರಾವರಿ ಹೋರಾಟಗಾರರಾದ ಆಂಜನೇಯ ರೆಡ್ಡಿ, ವಕೀಲ ಜೆ.ಬಿ.ಪ್ರಕಾಶ್, ಸಾಮಾಜಿಕ ಹೋರಾಟಗಾರ ಬಿ.ಎಚ್.ಸುರೇಶ್, ಸಾಮಾಜಿಕ ಕಾರ್ಯಕರ್ತ ಮನೋಹರ್ ಎನ್.ಗೌಡ ಕಲಾಕೂಟದ ಉಪಾಧ್ಯಕ್ಷ ಹಲ್ಲೇಗೆರೆ ಕೃಷ್ಣ ಹಾಜರಿದ್ದರು