ರಾಜಕೀಯ ಹಸ್ತಕ್ಷೇಪದಿಂದ ದೇಗುಲ ಮುಕ್ತಗೊಳಿಸಿ

UDP-22-12-VHP
ಉಡುಪಿಯಲ್ಲಿ ವಿಶ್ವ ಹಿಂದು ಪರಿಷತ್​ ಆಯೋಜಿಸಿದ್ದ ಷಷ್ಠಿಪೂರ್ತಿ ಸಮ್ಮೇಳನದಲ್ಲಿ ವಿದ್ಯೇಶ ತೀರ್ಥ ಶ್ರೀಪಾದರು ಮಾತನಾಡಿದರು. ವಿದ್ಯಾವಲ್ಲಭ ಶ್ರೀ, ವೇದವರ್ಧನ ಶ್ರೀ, ವಿಷ್ಣುಮೂರ್ತಿ ಆಚಾರ್ಯ, ಬಸವರಾಜ್​ ಜೀ, ಸಾಧು ಸಾಲ್ಯಾನ್​, ಪಾಂಡು ಪಾಣಾರ, ದೇವಿಪ್ರಸಾದ್​ ಶೆಟ್ಟಿ ಇತರರಿದ್ದರು.
Published on

| ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದ ಆಗ್ರಹ

| ಉಡುಪಿಯ ವಿಶ್ವ ಹಿಂದು ಪರಿಷತ್​ ಷಷ್ಠಿಪೂರ್ತಿ ಸಮ್ಮೇಳನ

ವಿಜಯವಾಣಿ ಸುದ್ದಿಜಾಲ ಉಡುಪಿ
ತಿರುಪತಿ ತಿರುಮಲ ದೇಗುಲದ ಪವಿತ್ರ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬಿನ ಅಂಶ ಸೇರಿದೆ ಎಂಬ ವಿಚಾರ ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಅಲ್ಲಿನ ಸರ್ಕಾರ ದೇವಾಲಯದ ಪೂಜಾ ಪದ್ಧತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರುವುದರಿಂದಲೇ ಅಂತಹ ಅನಾಹುತ ಘಟಿಸಿದೆ ಎಂದು ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಅಸಮಾಧಾನ ವ್ಯಕ್ತಪಡಿಸಿದರು.

ಉಡುಪಿಯ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್​ ಉಡುಪಿ ವತಿಯಿಂದ ಭಾನುವಾರ ಆಯೋಜಿಸಿದ್ದ ಷಷ್ಠಿಪೂರ್ತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಹಿಂದುಗಳಲ್ಲಿ ಒಗ್ಗಟ್ಟು ಅಗತ್ಯ

ಪ್ರತಿಯೊಂದು ದೇವಾಲಯಗಳಿಗೂ ಮಾರ್ಗದರ್ಶನ ಮಂಡಳಿ ರಚಿಸಬೇಕು. ತನ್ಮೂಲಕ ಮಠ-ಮಂದಿರಗಳನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು. ನಾವು ಎಲ್ಲರನ್ನೂ ಸಹೋದರ ಭಾವದಿಂದ ನೋಡಬೇಕು. ನಮ್ಮ ಆಚರಣೆ ಇನ್ನೊಬ್ಬರಿಗೆ ಹಿಂಸೆಯಾಗಬಾರದು. ಆದರೆ, ಧರ್ಮ ಪರಿಪಾಲನೆಯ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕು. ಸಮಾಜಮುಖಿ ಕೆಲಸ ಮಾಡಬೇಕು ಎಂದರು.

ಪುರೋಹಿತ್​ ಪ್ರಮುಖರಾದ ಬಸವರಾಜ್​ ಜೀ, ಉದ್ಯಮಿ ಸಾಧು ಸಾಲ್ಯಾನ್​, ಕೊಳಲು ವಾದಕ ಪಾಂಡು ಪಾಣಾರ, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್​ ಶೆಟ್ಟಿ, ನಗರ ಅಧ್ಯಕ್ಷ ರಾಕೇಶ್​ ಮಲ್ಪೆ, ನಗರ ಕಾರ್ಯದರ್ಶಿ ಲೋಕೇಶ್​ ಶೆಟ್ಟಿಗಾರ್​ ಉಪಸ್ಥಿತರಿದ್ದರು.

ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಸ್ವಾಗತಿಸಿದರು. ಪೂರ್ಣಿಮಾ ಸುರೇಶ್​ ನಿರೂಪಿಸಿದರು.

ವಿಶ್ವವನ್ನು ಒಂದುಗೂಡಿಸುವ ಶಕ್ತಿ ಹಿಂದು ಧರ್ಮಕ್ಕಿದೆ. ಹಿಂದುತ್ವ ಕೇವಲ ದೇಶದ ಧರ್ಮವಲ್ಲ. ಅದು ವಿಶ್ವದ ಮನೋ ಧರ್ಮವಾಗಬೇಕು. ಅದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಾದ ಸಂದರ್ಭವಿದು. ಇಂದಿನ ಪರಿಸ್ಥಿತಿಯಲ್ಲಿ ಹಿಂದು ಸಮಾಜದವರೆಲ್ಲರೂ ಒಗ್ಗೂಡಬೇಕಾದ ಅನಿವಾರ್ಯತೆ ಇದೆ.| ವಿದ್ಯಾವಲ್ಲಭ ತೀರ್ಥ ಶ್ರೀಪಾದರು. ಕಾಣಿಯೂರು ಮಠ

ನಾವೆಲ್ಲ ಹಿಂದುಗಳು ಎಂಬ ಭಾವನೆ ನಮ್ಮಲ್ಲಿರಬೇಕು. ಅದು ನಮ್ಮಲ್ಲಿದ್ದರಷ್ಟೇ ಸಾಲದು. ಆ ಕುರಿತು ವಿಶ್ವವ್ಯಾಪಿಯಾಗಿ ಜಾಗೃತಿ ಮೂಡಿಸಬೇಕು. ನಮ್ಮಲ್ಲಿ ಸಮರ್ಥ ಒಗ್ಗಟ್ಟು ಇಲ್ಲ ಎನ್ನುವುದನ್ನು ತಿರುಪತಿಯ ಘಟನೆ ಜಾಗೃತಿ ಮೂಡಿಸಿದೆ.| ವೇದವರ್ಧನ ತೀರ್ಥ ಶ್ರೀಪಾದರು. ಶಿರೂರು ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net