ಜಿಲ್ಲಾ ಪ್ರವೇಶ ನಿರ್ಬಂಧ ಹಿಂಪಡೆಯಲು ಒತ್ತಾಯ

chn sep 10 vhp prathibatane. (1)
Published on

ಚನ್ನಗಿರಿ: ರಾಜ್ಯದಲ್ಲಿ ವಿಶ್ವಹಿಂದು ಪರಿಷತ್ ಮುಖಂಡರಿಗೆ ಹಾಕಿರುವ ನಿರ್ಬಂಧದ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಹಾಗೂ ಗಣೇಶ ಉತ್ಸವ ಮತ್ತು ಶೋಭಾಯಾತ್ರೆಯನ್ನು ಸಂಭ್ರಮದಿಂದ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ವಿಶ್ವಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಊರ ಬಾಗಲ ಶ್ರೀ ಆಂಜನೇಯ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ಧೋರಣೆ ವಿರೋಧಿಸಿ ಘೊಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಬಜರಂಗದಳ ಜಿಲ್ಲಾ ಸಂಯೋಜಕ ರವಿಚಂದ್ರ ಮಾತನಾಡಿ, ಹಿಂದುಗಳಿಗೆ ಗೌರಿಗಣೇಶ ಹಬ್ಬ ಭಾವನಾತ್ಮಕ ಹಬ್ಬವಾಗಿದೆ. ಅಲ್ಲದೆ ಆಧಾತ್ಮಿಕ ಹಿನ್ನೆಲೆ ಇರುವುದರಿಂದ ಎಲ್ಲ ಧರ್ಮದವರು ಸೇರಿ ಹಬ್ಬ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯೂರ್ವದಲ್ಲಿ ಬಾಲ ಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಮೂಲಕ ಭಾರತೀಯರನ್ನು ಒಗ್ಗೂಡಿಸುತ್ತಿದ್ದರು. ಆದರೆ ಇಂದು ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ಹಬ್ಬಗಳ ಆಚರಣೆಗೆ ಕಾನೂತ್ಮಕವಾಗಿ ಅಡ್ಡಿ ಪಡಿಸುತ್ತಿದೆ ಎಂದು ದೂರಿದರು.

ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ದೇಶದ ಒಳತಿಗಾಗಿ ಇರುವ ಸಂಘಟನೆಗಳಾಗಿವೆ. ಅವು ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ. ಆದರೂ ರಾಜ್ಯ ಸರ್ಕಾರ ಅಧಿಕಾರಿಗಳ ಮೂಲಕ ಕಾರ್ಯಕರ್ತರ ಮೇಲೆ ಇಲ್ಲದ ಆರೋಪಗಳನ್ನು ಮಾಡಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ತಿಳಿಸಿದರು.

ಶೋಭಾಯಾತ್ರೆ ಸಮಯದಲ್ಲಿ ಅನ್ಯ ಕೋಮಿನವರು ಕಲ್ಲು ತೂರಾಟ, ಉಗಿಯುವುದನ್ನು ಮಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಮದ್ದೂರು, ಸಾಗರ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿದೆ. ಭದ್ರಾವತಿಯಲ್ಲಿ ಪಾಕಿಸ್ತಾನದ ಪರ ಘೊಷಣೆ ಕೂಗಿದ್ದಾರೆ. ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದು ಮುಂದುವರಿದರೆ ಹಿಂದುಗಳು ಓಡಾಡುವುದು ಕಷ್ಟವಾಗುತ್ತದೆ ಎಂದರು.

ರಾಜ್ಯದ ಹಲವು ಕಡೆಗಳಲ್ಲಿ ಡಿಜೆಗೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಕೆಲವು ಕಡೆ ಅಡ್ಡಿ ಪಡಿಸುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತು ಗಣಪತಿ ವಿಸರ್ಜನೆಯ ಶೋಭಾಯಾತ್ರೆಗೆ ಅವಕಾಶ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ್, ಗಣಪತಿ ಸಮಿತಿ ಅಧ್ಯಕ್ಷ ಮಂಜುನಾಥ್ ಕಾಳೆ, ತಾಲೂಕು ಸಂಚಾಲಕ ಶ್ರೀನಿವಾಸ್, ತಾಲೂಕಾಧ್ಯಕ್ಷ ಜಯಣ್ಣ ಮಾಚನಾಯಕನಹಳ್ಳಿ, ಬುಳ್ಳಿ ಗಣೇಶ್, ವಸಂತ, ಹೇಮಚಂದ್, ನಾಗೇಶ್, ರಂಗನಾಥ್, ಕಾಯಿ ಮಂಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net