

ಚಳ್ಳಕೆರೆ: ನಗರದ ಬಿಇಒ ಕಚೇರಿ ಆವರಣದಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳ ಸಹಯೋಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಶೋಭಯಾತ್ರೆ ಮೂಲಕ ವಿಸರ್ಜನೆ ಮಾಡಲಾಯಿತು.
ಮಧ್ಯಾಹ್ನ 1 ಗಂಟೆ ಸಮಯಕ್ಕೆ ನಗರದ ವಾಲ್ಮೀಕಿ ವೃತ್ತದಲ್ಲಿ ಮಹಿಳಾ ಕಲಾ ತಂಡಗಳೊಂದಿಗೆ ಕೋಲಾಟ ನೃತ್ಯ ಪ್ರದರ್ಶನದ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ಡಿಜೆ ಬಳಕೆಗೆ ಅವಕಾಶ ಇಲ್ಲದ ಕಾರಣ, ಸಾಂಪ್ರದಾಯಿಕ ಕಹಳೆ, ಕೋಲಾಟ, ಡ್ರಮ್, ಡೋಲು ಕಲಾ ತಂಡಗಳೊಂದಿಗೆ ಆರಂಭಗೊಂಡ ಮೆರವಣಿಗೆ ನೀರಸವಾಗಿತ್ತು.
ಲಕ್ಷಗಟ್ಟಲೆ ಜನಸೇರುವ ನಿರೀಕ್ಷೆ ಇದ್ದ ಶೋಭಯಾತ್ರೆಗೆ ಸಾವಿರ ಲೆಕ್ಕದಲ್ಲಿ ಜನ ಸೇರಲಾಗಿತ್ತು. ಇದರಿಂದ ಬೇಸರಗೊಂಡ ಭಕ್ತರು ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ವೃತ್ತದಲ್ಲಿ ಡಿಜೆ ಬೇಕೆಂದು ದಾರಿ ಮಧ್ಯೆದಲ್ಲೇ ಪ್ರತಿಭಟನೆ ನಡೆಸಿದರು. ಅಂಬೇಡ್ಕರ್, ನೆಹರು ವೃತ್ತದ ಮಾರ್ಗವಾಗಿ ಬೆಂಗಳೂರು ರಸ್ತೆಯಲ್ಲಿನ ಬಸವೇಶ್ವರ ವೃತ್ತದಿಂದ ಬಳ್ಳಾರಿ ರಸ್ತೆ ಮಾರ್ಗವಾಗಿ ವೆಂಕಟೇಶ್ವರ ನಗರ ಸಮೀಪದ ರೈತರ ತೋಟದಲ್ಲಿ ವಿಸರ್ಜಿಸಲಾಯಿತು.
ಡಿಜೆಗೆ ಪಟ್ಟು: ಡಿಜೆಗೆ ಅನುಮತಿ ಕೊಡಬೇಕೆಂದು ಪ್ರತಿಭಟನೆಗೆ ಕುಳಿತಿದ್ದ ಕಾರ್ಯಕರ್ತರ ನಡುವೆ ಮಾತಿಗಿಳಿದ ಪೊಲೀಸರು, ಸರ್ಕಾರದಿಂದ ಅನುಮತಿ ಇಲ್ಲ. ಡಿಜೆ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಆದೇಶ ಇದೆ ಎಂದು ಹೇಳುತ್ತಿದ್ದಂತೆ ಸಿಟ್ಟಿಗೆದ್ದ ಪ್ರತಿಭಟನಾಕಾರರು, ಇದೇ ನಗರದಲ್ಲಿ ಶ್ರೀಕೃಷ್ಣ ಜಯಂತಿ, ಈದ್‌ಮಿಲಾದ್ ಹಬ್ಬಕ್ಕೆ ಡಿಜೆ ಬಳಸಲಾಗಿದೆ. ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ನಡೆದ ಕೃಷ್ಣ ಜಯಂತಿಗೆ ಡಿಜೆ ತರಿಸಲಾಗಿದೆ ಎಂದರು.
ಸೆ.7ರಂದು ಮೊಳಕಾಲ್ಮೂರಿನಲ್ಲಿ ಮತ್ತು ಹೊಳಲ್ಕೆರೆಯಲ್ಲಿ ನಡೆಯುವ ಶೋಭಯಾತ್ರೆಗೆ ಡಿಜೆ ಬಳಸಲು ಅನುಮತಿ ನೀಡಲಾಗಿದೆ. ಈಗಾಗಲೇ ಬಳ್ಳಾರಿಯಲ್ಲಿ ಡಿಜೆ ಬಳಸಿ ಅದ್ದೂರಿಯಾಗಿ ಶೋಭಯಾತ್ರೆ ನಡೆಸಲಾಗಿದೆ. ಚಳ್ಳಕೆರೆಯಲ್ಲಿ ಇರುವ ಕಾನೂನು ಯಾವುದು?, ಇವತ್ತು ಡಿಜೆ ರದ್ದುಪಡಿಸಿದಂತೆ ಮುಂದಿನ ದಿನ ಗಣೇಶ ಉತ್ಸವನೇ ರದ್ದುಪಡಿಸುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾತನಾಡಿದಾಗ, ಸ್ಥಳೀಯ ಪೊಲೀಸ್ ಅಧಿಕಾರಿಗಳ ಮತ್ತು ಮೆರವಣಿಗೆಯ ಪರಿಸ್ಥಿತಿಗೆ ಅನುಗುಣವಾಗಿ ಅವಕಾಶ ಮಾಡಿಕೊಳ್ಳಿ ಎಂದಿದ್ದಾರೆ. ಆದರೂ, ನೀವೇಕೆ ಒಪ್ಪುತ್ತಿಲ್ಲ ಎಂದು ಪೊಲೀಸ್ ಉಪ ಅಧೀಕ್ಷಕ ಟಿ.ಬಿ.ರಾಜಣ್ಣ ಅವರ ನಡುವೆ ಮಾತಿನ ಚಕಮಕಿ ನಡೆಸಿದರು.
ಪ್ರತಿಭಟನೆಗೆ ಮಣಿದ ರಾಜಣ್ಣ ಎರಡು ಸ್ಪೀಕರ್ ಬಳಕೆಗೆ ಅವಕಾಶ ಮಾಡಿಕೊಳ್ಳಿ ಎಂದರು. ಎರಡು ಸ್ಪೀಕರ್ ಜತೆಗೆ, ಮ್ಯೂಸಿಕ್ ಬರುವ ಎರಡು ಊಫರ್ ಬಳಕೆಗೆ ಅವಕಾಶ ಕೊಡಬೇಕೆಂದು ಒತ್ತಾಯಪಡಿಸಿದರು. ನಿಗದಿಪಡಿಸಿದ ಅವಧಿಯೊಳಗೆ ಮೆರವಣಿಗೆ ಮುಗಿಯಬೇಕು. ಹೆಚ್ಚು ಧ್ವನಿ ಹೊರಹೊಮ್ಮದಂತೆ ಸ್ಪೀಕರ್ ಬಳಕೆ ಆಗಬೇಕು. ಶಾಂತಿ ಕಾಪಾಡಿಕೊಳ್ಳುವ ರೀತಿ ಮೆರವಣಿಗೆ ನಡೆಯಬೇಕು ಎಂದು ಕೆಲ ಷರತ್ತುಗಳು ಹಾಕಿ ಪೊಲೀಸರು ಸ್ಪೀಕರ್‌ಗೆ ಅನುಮತಿ ನೀಡಿದರು.
ಡಿಜೆ ವಶಕ್ಕೆ ಪಡೆದ ಪೊಲೀಸರು: ಶೋಭಯಾತ್ರೆ ಆರಂಭಕ್ಕೂ ಮುನ್ನವೇ ಮೆರವಣಿಗೆ ಮಧ್ಯದಲ್ಲಿ ಡಿಜೆ ಬಳಕೆ ಮಾಡಿಕೊಳ್ಳಲು ಸಂಘಟಕರು ಸಿದ್ಧತೆ ಮಾಡಿಕೊಂಡಿದ್ದರು. ಪೊಲೀಸರು ಡಿಜೆ ಸಹಿತ ಟ್ರ್ಯಾಕ್ಟರ್ ಚಾಲಕನನ್ನು ವಶಕ್ಕೆ ಪಡೆದು ಫೋನ್ ಸ್ವಿಚ್ ಆಫ್ ಮಾಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ದಿಢೀರನೇ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ಸರ್ಕಲ್‌ನಲ್ಲಿ ಡಿಜೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ತಂಪು ಪಾನೀಯ ವಿತರಣೆ: ಮುಂಜಾಗ್ರತವಾಗಿ ಶೋಭಯಾತ್ರೆ ಸಂಚರಿಸುವ ನಗರದ ಪ್ರಮುಖ ನಾಲ್ಕು ರಸ್ತೆ ಭಾಗದ ಉದ್ದಕ್ಕೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ವೀರಶೈವ ಕಲ್ಯಾಣ ಮಂಟಪ ಬಳಿ ಸೇರಿ ಇತರ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯ ಮತ್ತು ಸಂಘ ಸಂಸ್ಥೆಗಳಿಂದ ಲಘು ಉಪಹಾರ, ತಂಪು ಪಾನೀಯ, ಸೋಡಾ ಉಚಿತವಾಗಿ ವಿತರಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಂಡಲ್ ಅಧ್ಯಕ್ಷ ಜಿ.ಎಂ.ಸುರೇಶ್, ಕೆ.ಎಂ.ಯತೀಶ್, ಜಿ.ಎಸ್.ಶಿವಪುತ್ರಪ್ಪ, ಬಾಳೆಕಾಯಿ ರಾಮ್‌ದಾಸ್, ಸೋಮಶೇಖರ್ ಮಂಡಿಮಠ್, ಮಾತೃಶ್ರೀ ಮಂಜುನಾಥ, ಜಿ.ಪಿ.ಜಯಪಾಲಯ್ಯ, ಹೊನ್ನೂರು ವೆಂಕಟಪ್ಪ, ಉಪ್ಪಾರಹಟ್ಟಿ ಈರಣ್ಣ, ಎಚ್.ಉಮೇಶ್, ಮಾಂತಣ್ಣ, ನಾಗೇಶ್, ಸುಂದರ್‌ಸಿಂಗ್, ದರ್ಶನ್, ಬಿ.ಜಿ.ಪ್ರಕಾಶ್, ಟಿ.ತಿಮ್ಮಪ್ಪ, ಕೃಷ್ಣಮೂರ್ತಿ, ಕೆ.ವಿ.ಚಿದಾನಂದ, ಸುರೇಶ್, ಭರತ್, ಟಿ.ಕೆ.ದರ್ಶನ್, ಸಿ.ವೀರೇಶ್ ಇತರರಿದ್ದರು.