

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಸಂಘಟನೆ ಮೂಲಕ ಸಮಾಜವನ್ನು ಒಂದುಗೂಡಿಸಿ ಎಲ್ಲರನ್ನೂ ಉನ್ನತಿಯೆಡೆಗೆ ಕರೆದೊಯ್ಯುವ ಅಗತ್ಯವಿದೆ. ಆಧುನಿಕತೆಯ ಅಳವಡಿಕೆ, ಹೊಸತನಗಳೊಂದಿಗೆ ಕುಲಕಸುಬನ್ನು ಬಿಡದೆ, ಉದ್ಯೋಗ ಅವಕಾಶ ಬಳಸಿಕೊಳ್ಳಬೇಕು ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಸ್.ಆರ್.ಹರೀಶ್ ಆಚಾರ್ಯ ಹೇಳಿದರು.
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ಶ್ರೀಕರ ಆಸ್ರಣ್ಣ ಮಾತನಾಡಿ, ಅಧ್ಯಾತ್ಮ ಚಿಂತನೆಯೊಂದಿಗೆ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಿಸುವ ಅಗತ್ಯ ಇದೆ ಎಂದರು.
ಪವನ್ ಶರ್ಮ ದಿಕ್ಸೂಚಿ ಮಾತನಾಡಿ, ಯುವ ಜನಾಂಗ ಮೊಬೈಲ್, ಅನಗತ್ಯ ವಿಚಾರಗಳಲ್ಲಿ ಕಳೆದು ಹೋಗದೆ, ಸಂಸ್ಕೃತಿ, ಸಂಸ್ಕಾರದ ಸಂಗತಿಗಳಲ್ಲಿ ಕ್ರಿಯಾಶೀಲರಾಗುವಂತೆ ಸಮಾಜ ಸೇವಾ ಸಂಘಟನೆಗಳು ಯೋಜನೆ ಹಾಕಿಕೊಳ್ಳಬೇಕು ಎಂದರು.
ಸಮಾಜದ ಸಾಧಕರಾದ ಕಾಷ್ಠಶಿಲ್ಪಿ ಜಯರಾಮ ಆಚಾರ್ಯ, ಸಂಗೀತ ಕಲಾವಿದ, ಸಂಘಟಕ ಪ್ರಕಾಶ್ ಆಚಾರ್, ಕ್ರೀಡಾಪಟು ಜಯಲಕ್ಷ್ಮೀ ಆಚಾರ‌್ಯ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಸುರತ್ಕಲ್‌ನ ಎಂ.ಶ್ರೀನಿವಾಸ ಆಚಾರ್ಯ, ಎಳತ್ತೂರು ದೇಗುಲದ ಮೊಕ್ತೇಸರ ಸಂತೋಷ್ ಕುಮಾರ ಹೆಗ್ಡೆ, ಪಕ್ಷಿಕೆರೆಯ ಜಯರಾಮ ಆಚಾರ್ಯ, ಪಡುಪಣಂಬೂರು ಗಾಯತ್ರೀ ಮಹಿಳಾ ಮಂಡಲದ ಶ್ರೀಮತಿ ಸತ್ಯವಾಸುದೇವ ಆಚಾರ್ಯ, ಅಣ್ಣಯ್ಯಚಾರ್ಯ ಸಭಾಭವನ ಸಮಿತಿ ಪೃಥ್ವಿರಾಜ ಆಚಾರ್ಯ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಜಗದೀಶ ಆಚಾರ್ಯ, ಕಾಳಿಕಾಂಬಾ ಮಹಿಳಾ ವೃಂದದ ಶಶಿಕಲಾ ಯೋಗೀಶ್ ಆಚಾರ್ಯ, ರಂಜನ್ ಕುಮಾರ್, ಜಗದೀಶ ಆಚಾರ್ಯ, ಪ್ರತಿಮಾ ಪ್ರಕಾಶ್, ರೂಪಾ ದೇವರಾಜ್ ಮತ್ತಿತರರಿದ್ದರು. ರಚನ ಆಚಾರ‌್ಯ ಕಾರ್ಯಕ್ರಮ ನಿರೂಪಿಸಿದರು.