

ಮಂಡ್ಯ: ವಿಶ್ವಕರ್ಮ ಸಮುದಾಯ ವಾಸ್ತು ಕಲೆಯನ್ನು ಪ್ರಪಂಚಕ್ಕೆ ಪರಿಚಯಿಸಿದ ಮೊದಲ ಇಂಜಿನಿಯರ್‌ಗಳಾಗಿದ್ದು, ಅವರ ಸಾಧನೆ ಹಾಗೂ ಕೊಡುಗೆ ಅಪಾರ ಎಂದು ಶಾಸಕ ರವಿಕುಮಾರ್ ಗಣಿಗ ಬಣ್ಣಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಸೃಷ್ಟಿಗೆ ಬ್ರಹ್ಮ ಕಾರಣವಾದರೆ, ಜಗತ್ತು ಹೇಗಿರಬೇಕು ಎಂದು ರೂಪಿಸಿದ ಶಿಲ್ಪಿ ವಿಶ್ವಕರ್ಮ. ಹಿಂದು ಸಂಪ್ರದಾಯದಲ್ಲಿ ದೇವತೆಗಳಿಗೆ ಸ್ವರ್ಗಲೋಕದಲ್ಲಿ ಅರಮನೆ ನಿರ್ಮಿಸಿದವರು. ಜತೆಗೆ ದೇವರ ಆಯುಧಗಳನ್ನು ನಿರ್ಮಾಣ ಮಾಡಿದವರು. ನಮ್ಮ ಸರ್ಕಾರವು ಸಣ್ಣ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದೆ. ಇಂತಹ ಜಯಂತಿಗಳನ್ನು ಆಚರಿಸುವ ಮೂಲಕ ಎಲ್ಲ ಸಮುದಾಯದವರ ಕೊಡುಗೆಗಳನ್ನು ಸಮಾಜಕ್ಕೆ ತಿಳಿಸಬಹುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ವಿಶ್ವಕರ್ಮ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೆ ಗುರುವಾದ, ದೇವಲೋಕ, ಸ್ವರ್ಗಲೋಕವನ್ನು ಹಾಗೂ ದೇವತೆಗಳಿಗೆ ವಾಹನಗಳನ್ನು ನಿರ್ಮಾಣ ಮಾಡಿ ಸೃಷ್ಟಿಕರ್ತ ಬ್ರಹ್ಮನಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದ ನುರಿತ ಗುರು ವಿಶ್ವಕರ್ಮ. ಅವರ ಪ್ರಾಮುಖ್ಯತೆ ಹಾಗೂ ಮಹತ್ವವನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.
ವಿಶ್ವಕರ್ಮ ಗುರುವು ವಾಸ್ತು ಶಿಲ್ಪ, ಕಲೆಯಲ್ಲಿ ಸಾಕಷ್ಟು ಕೊಡುಗೆ ನೀಡಿ ಅಪಾರ ಸಾಧನೆ ಮಾಡಿದ್ದಾರೆ. ಅಂದಿನ ಕಾಲದಲ್ಲಿಯೇ ವಾಸ್ತುಶಿಲ್ಪ ಹೇಗಿರಬೇಕು ಎಂದು ಕಂಡುಕೊಂಡಿದ್ದರಿಂದ ಇಡೀ ಜಗತ್ತಿನ ಮೊದಲ ಇಂಜಿನಿಯರ್ ಎಂದು ಹೇಳಬಹುದು. ಅವರನ್ನು ಪ್ರತಿಯೊಬ್ಬರೂ ಆರಾಧಿಸಬೇಕು. ಪಿಎಂ ವಿಶ್ವಕರ್ಮ ಯೋಜನೆಯಡಿ ವಿಶ್ವಕರ್ಮ ಸಮುದಾಯದ ಕರಕುಶಲ ಕೌಶಲ, ಬಡಿಗೆ, ಕಮ್ಮಾರಿಕೆ ಸೇರಿದಂತೆ 16ಕ್ಕೂ ಹೆಚ್ಚು ಕೌಶಲಗಳ ವೃತ್ತಿಪರರಿಗೆ ಸುಮಾರು 15 ರಿಂದ 20 ದಿನಗಳ ಕಾಲ ಉಚಿತವಾಗಿ ಸೂಕ್ತ ತರಬೇತಿ ನೀಡಲಾಗುವುದು. ಮಾತ್ರವಲ್ಲದೆ ಶೇ.2ರಷ್ಟು ಬಡ್ಡಿರಹಿತ ಸಾಲ ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಸುಮಾರು 80 ಸಾವಿರ ಅರ್ಜಿ ಬಂದಿರುತ್ತದೆ ಎಂದರು.
ಒಂದು ಕಲ್ಲನ್ನು ಮೂರ್ತಿಯನ್ನಾಗಿ ಕೆತ್ತನೆ ಮಾಡಿ ಪೂಜಿಸುವಂತ ಸ್ಥಿತಿಗೆ ಕೊಂಡೊಯ್ಯುವ ಕಲೆ ದೈವದತ್ತವಾಗಿದೆ. ಇಂತಹ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಇನ್ನೂ ಹೆಚ್ಚಿನ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸವಾಗಬೇಕು. ಶಿಲ್ಪಿಗಳಲ್ಲಿ ಸೃಜನಶೀಲತೆ, ಪರಿಶ್ರಮ ಹಾಗೂ ಕೌಶಲ ಅಂಶಗಳು ಇರುತ್ತವೆ. ಇವುಗಳ ಸೊಗಡು ಹಾಗೂ ಪರಂಪರೆಯನ್ನು ನಶಿಸಿ ಹೋಗಲು ಬಿಡದೆ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಕೆಲಸವಾಗಬೇಕು ಎಂದರು.
ಉಪನ್ಯಾಸ ನೀಡಿದ ವೇದ ಬ್ರಹ್ಮಶ್ರೀ ಕೆ.ರಾಘವೇಂದ್ರ ಸ್ತಪತಿ, ವಿಶ್ವಕರ್ಮನ ಜಯಂತಿಯನ್ನು ಪ್ರತಿ ವರ್ಷ ಕನ್ಯಾ ಸಂಕ್ರಾಂತಿಯಂದು ಆಚರಿಸಲಾಗುವುದು. ಇಡೀ ಭೂ ಮಂಡಲವನ್ನು ನಿರ್ಮಿಸಿದ ಈತನನ್ನು ವಾಸ್ತು ಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರತಿ ವರ್ಷ ಒಂದು ದಿನ ಆತನಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಶ್ವಕರ್ಮನು ಶಿಲ್ಪಕಲೆಗಳ ದೇವರು ಎಂದು ಕರೆಯಿಸಿಕೊಂಡಿದ್ದು, ದೇವತೆಗಳು ಈತನನ್ನು ಅರಮನೆ, ವಾಸ್ತುಶಿಲ್ಪಗಳನ್ನು, ಆಯುಧಗಳನ್ನು ಮಾಡಿಕೊಡಲು ದೇವಲೋಕಕ್ಕೆ ಕರೆದುಕೊಂಡು ಹೋದರು. ಅನಂತರ ಇವರನ್ನು ದೇವಶಿಲ್ಪಿ ಎಂದೂ ಕರೆಯಲಾಗುತ್ತದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ವಿಶ್ವಕರ್ಮ ವೇದಿಕೆ ಅಧ್ಯಕ್ಷ ತಿರುಮಲಚಾರ್ಯ, ಮುಖಂಡರಾದ ಎಲ್.ಸಂದೇಶ್, ಸುದರ್ಶನ್, ರಮೇಶ್, ಪ್ರೊ.ಯೋಗನರಸಿಂಹಚಾರಿ, ಶ್ರೀನಿವಾಸಮೂರ್ತಿ, ಸತೀಶ್, ನಾಗರಾಜು ಇತರರಿದ್ದರು.