

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಕಾಣಬಹುದು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ ಅಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್‌ನಲ್ಲಿರುವ ತಾಲೂಕು ಆಡಳಿತ ಸೌಧದ ಒಳಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸಮಾಜದಲ್ಲಿ ಶ್ರೇಷ್ಠ ಸೃಷ್ಟಿಯ ಶಿಲ್ಪಿಗಳಾಗಿ ವಿಶ್ವಕರ್ಮರು ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ದೈನಂದಿನ ಜೀವನದಲ್ಲಿ ನಾವು ಬಳಸುವ ವಿಗ್ರಹಗಳು, ಯಂತ್ರಗಳು ಹಾಗೂ ಪೀಠೋಪರಣಗಳು ಇತ್ಯಾದಿ ಅಗತ್ಯ ವಸ್ತುಗಳನ್ನು ವಿಶ್ವಕರ್ಮ ಸ್ವಾಮಿಗಳಿಂದ ನಮಗೆ ದೊರಕಿದೆ. ಅವರ ವಿಗ್ರಹ ಕೆತ್ತನೆಯ ಮೇಲಿದ್ದ ತಾಳ್ಮೆ, ಸಹನೆ ಅತ್ಯದ್ಭುತವಾದದ್ದು ಎಂದು ಬಣ್ಣಿಸಿದರು.
ಪ್ರತಿಜ್ಞೆ ಮಾಡೋಣ:
ಕೈಗಾರಿಕಾ, ತಾಂತ್ರಿಕ, ಶಿಲ್ಪ ಕೌಶಲ ರಂಗದಲ್ಲಿ ಮತ್ತಷ್ಟು ಸಾಧನೆ ಮಾಡಲು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಈ ಶುಭದಿನದಂದು ಪ್ರತಿಜ್ಞೆ ಮಾಡೋಣ. ನಮ್ಮ ಜೀವನವು ಶ್ರಮ ಮತ್ತು ಶ್ರೇಷ್ಠತೆಯ ಹಾದಿಯಲ್ಲಿ ಸಾಗಲಿ, ವಿಶ್ವಕರ್ಮ ಸ್ವಾಮೀಜಿಯ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ ಎಂದು ಎಡಿಸಿ ಹೇಳಿದರು.
ಸೃಷ್ಟಿಯ ಶಿಲ್ಪಿ:
ಬೆಸ್ಕಾಂ ನಿವೃತ್ತ ಅಭಿಯಂತರ ಶಂಕರ್‌ನಾರಾಯಣ್ ಆಚಾರ್ ಉಪನ್ಯಾಸ ನೀಡಿ ಮಾತನಾಡಿದರು. ಸೃಷ್ಟಿಯ ಶಿಲ್ಪಿ ವಿಶ್ವಕರ್ಮರಾಗಿದ್ದಾರೆ ಇಂದ್ರ ಪ್ರಸ್ತ, ದ್ವಾರಕಾ ಮುಂತಾದ ದೇವರ ಆಸ್ಥಾನಗಳು ಇವರ ಶಿಲ್ಪಕಲೆಯಲ್ಲಿ ಅರಳಿದೆ. ಜತೆಗೆ ವಿಷ್ಣು ಚಕ್ರ, ಈಶ್ವರನಿಗೆ ತ್ರಿಶೂಲ ಮಾಡಿದ್ದು ಇವರೇ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ದೇವಾನುದೇವತೆಗಳ ಸಂಸ್ಥಾನಗಳಲ್ಲಿ ಶಿಲ್ಪಕಲೆ ಕೆತ್ತಿರುವ ಅವರ ಕೊಡುಗೆ ಇಂದಿಗೂ ಪ್ರಸ್ತುತ ಎಂದರು.