

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ವಿಶ್ವಕರ್ಮ ಜನಾಂಗ ಹಿಂದುಳಿದಿದೆ ಎಂಬ ಭಾವನೆ ಬಿಟ್ಟು ವಿದ್ಯಾವಂತರಾಗಿ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮುಂದುವರಿಯಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಹೊಸಕೋಟೆ ತಾಲೂಕು ವಿಶ್ವಕರ್ಮ ಸಂಘದಿಂದ ಆಯೋಜಿಸಿದ್ದ 9ನೇ ವರ್ಷದ ಭಗವಾನ್ ಶ್ರೀವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.
ವಿಶ್ವಕರ್ಮ ಸಮಾಜದ ಅಭಿವೃದ್ಧಿ ಆಗಬೇಕಾದರೆ ಸಮುದಾಯದಲ್ಲಿ ಹೊಂದಾಣಿಕೆ ಅಗತ್ಯ. ದೇಶಕ್ಕೆ 5 ಸಾವಿರ ವರ್ಷಗಳ ಇತಿಹಾಸ ಇದ್ದು, ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಸ್ಥಾನಮಾನ ಸಹ ಇದೆ. ದೇವರುಗಳನ್ನು ಸೃಷ್ಟಿಸಿದವರು ವಿಶ್ವಕರ್ಮರು. ಆದರೆ 75 ವರ್ಷಗಳಿಂದ ದೇಶದಲ್ಲಿ ಇಬ್ಬರು ಶಾಸಕರನ್ನು ಸೃಷ್ಟಿ ಮಾಡಲಾಗಲಿಲ್ಲ, ಆದ್ದರಿಂದ ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಸ್ಥಾನಮಾನಕ್ಕಾಗಿ ಹೋರಾಡಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವುದೊಂದೆ ಅಲ್ಲ, ಪ್ರಜಾಪ್ರಭುತ್ವದಲ್ಲಿ ನಾವೂ ಕೂಡ ಒಂದು ಭಾಗವಾಗಬೇಕು ಎಂದರು.
ಕಂದಾಯ ಇಲಾಖೆ ನಿವೃತ್ತ ಜಂಟಿ ಕಾರ್ಯದರ್ಶಿ ಮಾಳಿಗಾಚಾರ್ ಮಾತನಾಡಿ, ವಿಶ್ವಕರ್ಮ ಸಮುದಾಯ ಕುಲ ಕಸುಬಿನ ಜತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಹ ಸಾಧನೆಗೈಯ್ಯುವ ಕೆಲಸ ಆಗಬೇಕು. ಸಮುದಾಯದಲ್ಲಿ ಸಂಘಟನೆ ಮರೀಚಿಕೆಯಾಗಿದೆ. ಸಮುದಾಯದ ಸಂಘಟನೆಗೆ ಚಿಂತನ ಮಂಥನ ಆಗಬೇಕು. ರಾಜಕೀಯವಾಗಿ ಅಧಿಕಾರ ಇದ್ರೆ, ಸಮಾಜಕ್ಕೆ ಏನಾದರು ಮಾಡಬಹುದು. ಇಲ್ಲ ಅಂದ್ರೆ ಏನು ಮಾಡಲು ಸಾಧ್ಯವಿಲ್ಲ ಎಂದರು.
ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಗೋವಿಂದಮ್ಮ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಕಾರ್ಯದರ್ಶಿ ವಿನಾಯಕ್ ಆಚಾರಿ, ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಆಚಾರಿ, ಗೌರವಾಧ್ಯಕ್ಷ ಮಾಯಣ್ಣ ಆಚಾರ್, ಉಪಾಧ್ಯಕ್ಷ ಶಂಕರಾಚಾರ್, ಖಜಾಂಚಿ ವಿ ಶಂಕರಾಚಾರ್, ಪ್ರಧಾನ ಕಾರ್ಯದರ್ಶಿ ಮುನಿಶಾಮಾಚಾರ್, ಕಾರ್ಯದರ್ಶಿ ರಾಜಗೋಪಾಲ್, ಪದಾಧಿಕಾರಿಗಳಾದ ಚಂದ್ರಾಚಾರಿ, ದೇವರಾಜ್ ಅಶ್ವತ್ ಆಚಾರಿ, ಶಂಕರಾಚಾರ್, ವೀರ ಬ್ರಹ್ಮಚಾರಿ, ಮಹಾಲಿಂಗ ಆಚಾರಿ ಇದ್ದರು.