ಆರೋಗ್ಯದ ಕುರಿತು ಜಾಗ್ರತೆ ಅಗತ್ಯ: ಡಿಎಚ್‌ಒ

Senior Citizen888
Published on
ಚಿತ್ರದುರ್ಗ:ರಕ್ತದೊತ್ತಡ, ಮಧುಮೇಹ, ರಕ್ತಹೀನತೆ, ಕ್ಯಾನ್ಸರ್‌, ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಹಿರಿಯ ನಾಗರಿಕರು ತುಂಬಾ ಎಚ್ಚರಿಕೆಯಿಂದ ಇರಬೇಕು. ರೋಗಗಳು ಹತ್ತಿರ ಸುಳಿಯದಂತೆ ಪೌಷ್ಠಿಕ ಆಹಾರ ಸೇವನೆಯ ಜತೆಗೆ ಉತ್ತಮ ಜೀವನಶೈಲಿಯೊಂದಿಗೆ ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ಡಿಎಚ್‌ಒ ಡಾ.ಆರ್.ರಂಗನಾಥ್‌ ಸಲಹೆ ನೀಡಿದರು.

ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಹಿರಿಯ ನಾಗರಿಕರ ಸಪ್ತಾಹ ಹಾಗೂ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಕ್ಕಿಂತ ದೊಡ್ಡದು ಯಾವುದು ಇಲ್ಲ. ಸೇವಿಸುವ ಆಹಾರದಿಂದ ಏನಾದರೂ ಸಮಸ್ಯೆ ಉಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಸರ್ಕಾರದಿಂದ ನಡೆಯುವ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ, ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿ ಎಂದರು.

ಆಯುಷ್ ತಜ್ಞ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ವಯಸ್ಸಾದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಸಹಜ. ಆದರೆ, ಯಾರು ಧೃತಿಗೆಡುವ ಅಗತ್ಯವಿಲ್ಲ. ಉತ್ತಮ ಆಹಾರ, ಇತಿಮಿತಿಯಲ್ಲಿ ಔಷಧ ಸೇವನೆ ರೂಢಿಸಿಕೊಳ್ಳಿ. ನಿತ್ಯ ಯೋಗ, ವಾಯುವಿಹಾರ, ಧ್ಯಾನ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಮಾತನಾಡಿ, ತಂದೆ-ತಾಯಿ, ಅಜ್ಜ-ಅಜ್ಜಿ ಆಸ್ತಿ ಮಾಡಿಲ್ಲವೆಂದು ಎಂದಿಗೂ ದೂಷಿಸಬೇಡಿ. ಹಿರಿಯ ನಾಗರಿಕರೇ ಮನೆಯ ಆಸ್ತಿ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಮಾನವೀಯತೆ ಮರೆತು ಬದುಕುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಲಹೆ ನೀಡಿದರು.

ಇದೇ ವೇಳೆ ಹಿರಿಯ ನಾಗರಿಕರಿಗೆ ಕೀಲು-ಮೂಳೆ, ಕಣ್ಣಿನ ಪರೀಕ್ಷೆ, ಕಿವಿ, ಮೂಗು, ಗಂಟಲು ತಪಾಸಣೆ, ರಕ್ತದೊತ್ತಡ, ಮಧುಮೇಹ ಹಾಗೂ ಇತರೆ ಕಾಯಿಲೆಗಳ ಸಂಬಂಧ ರಕ್ತ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲಾಯಿತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಇಲಾಖೆ ಮಾಹಿತಿ ಸಲಹೆಗಾರ ಡಿ.ಪ್ರಸನ್ನ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ವೈ.ಚಂದ್ರಶೇಖರಯ್ಯ, ಹಿರಿಯ ನಾಗರಿಕರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ ರೆಡ್ಡಿ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜೆ.ಹರಿಪ್ರಸಾದ್, ಅರುಣಾ ಇತರರಿದ್ದರು.
Attachments area
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net