

ಮಂಗಳೂರು : ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ ಇದರ ವಾರ್ಷಿಕ ಸಭೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿದ್ದ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಜಿ.ಯಶವಂತ ಆಚಾರ್ಯ ಮಾತನಾಡಿ ‘ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ದಾರಕ ಸಭಾ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ.ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಹೊಂದುವಂತಾಗಬೇಕು ಎಂದರು.
ಸಭಾದ ಗೌರವಾಧ್ಯಕ್ಷ ಧನಂಜಯ ಪಾಲ್ಕೆ ಮಾತನಾಡಿ ‘ ಸಂಸ್ಥೆಯ ವತಿಯಿಂದ ಸಂಸ್ಕೃತ ಪಾಠ ಶಾಲೆಯ ಕಟ್ಟಡ ಮೂಡುಬಿದಿರೆಯ ಕೋಟೆ ಬಾಗಿಲಿನಲ್ಲಿ ನಿರ್ಮಾಣವಾಗಲಿದೆ. ಸುಮಾರು ಒಂದು ಕೋಟಿ ರೂ.ವೆಚ್ಚದ ಈ ಮಹತ್ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.
ಪುರೋಹಿತರಾದ ಪಿ.ನಾರಾಯಣ ಆಚಾರ್ಯ ಕುಳಾಯಿ ಮತ್ತು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ.ಎಸ್.ಆರ್. ಹರೀಶ್ ಆಚಾರ್ಯ ಅವರನ್ನು ಗೌರವಿಸಲಾಯಿತು. ಸಭಾದ ಅಧ್ಯಕ್ಷ ನಾಗರಾಜ್ ಪಾಲ್ಕೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಯು.ಗಣೇಶ್, ಜತೆ ಕಾರ್ಯದರ್ಶಿ ಗಣೇಶ್.ಕೆ.ಎ. ಉಪಸ್ಥಿತರಿದ್ದರು.
ಉಪಾಧ್ಯಕ್ಷ ಸುರೇಶ್.ಬಿ.ಸ್ವಾಗತಿಸಿ, ರವೀಂದ್ರ .ಎಸ್.ವಂದಿಸಿದರು. ಕಾರ್ಯದರ್ಶಿ ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸಿದರು.