

ಮಡಿಕೇರಿ:
ಮಡಿಕೇರಿಯ ವಿಷ್ಣು ಸೇನಾ ಸಮಿತಿ ವತಿಯಿಂದ ಶನಿವಾರ (ಸೆ.20) ಮಡಿಕೇರಿಯಲ್ಲಿ ಡಾ. ವಿಷ್ಣುವರ್ಧನ್ 75ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ ಎಂದು ಸಂಘಟನೆಯ ಅಧ್ಯಕ್ಷ ರಫೀಕ್ ದಾದಾ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಲ್ಲಿನ ಅಬ್ದುಲ್ ಕಲಾಂ ಲೇಔಟ್‌ನಲ್ಲಿ ಇರುವ ಜನ ವಿಕಾಸ್ ಸೇವಾ ಟ್ರಸ್ಟ್ ವೃದ್ಧಾಶ್ರಮದಲ್ಲಿ ಮಧ್ಯಾಹ್ನ 2 ಗಂಟೆಗೆ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಆಚರಣೆಗೆ ಚಾಲನೆ ನೀಡಲಾಗುತ್ತದೆ.
ನಂತರ ವೃದ್ಧಾಶ್ರಮದ ನಿವಾಸಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ 5 ಸ್ಟಾರ್ ಸಿಂರ‍್ಸ್ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಕೊಡವ ಬರಹಗಾರರಾದ ಉಳ್ಳಿಯಡ ಪೂವಯ್ಯ, ಡಾಟಿ ಪೂವಯ್ಯ, ಪಿ.ಜಿ. ಮಂಜುನಾಥ್ ಮತ್ತಿತರರು ಆಗಮಿಸಲಿದ್ದಾರೆ. ವಿಷ್ಣುವರ್ಧನ್ ಜನ್ಮ ದಿನ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಮಡಿಕೇರಿಯಲ್ಲಿ ಇರುವ ಸರ್ಕಾರಿ ನಾಮಫಲಕಗಳ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಬೆಂಗಳೂರಿನಲ್ಲಿ ಡಾ. ವಿಷ್ಣುವರ್ಧನ್ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಿದ ಕಿಡಿಗೇರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಿಷ್ಣುವರ್ಧನ್ ಅಭಿಮಾನಿಗಳ ಕಣ್ಣೊರೆಸುವ ತಂತ್ರವಾಗಿ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮೊದಲಿದ್ದ ಜಾಗದಲ್ಲೇ ವಿಷ್ಣು ಸಮಾಧಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಖಜಾಂಚಿ ಪಿ.ಐ. ಅನ್ಸಾರ್, ಪ್ರಮುಖರಾದ ರಮೇಶ್ ರೈ, ಪಿ.ಜಿ. ಮಂಜುನಾಥ್ ಇದ್ದರು.