

ಹುಬ್ಬಳ್ಳಿ: ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಡಾ. ವಿಷ್ಣು ಸೇನಾ ಸಮಿತಿ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಸ್ಯಾಂಡಲ್ ವುಡ್ ಸುಪ್ರಸಿದ್ಧ ನಟ ಡಾ. ವಿಷ್ಣುವರ್ಧನ್ ಅವರ 15ನೇ ಪುಣ್ಯ ಸ್ಮರಣೆಯನ್ನು ಸಾರ್ವಜನಿಕರಿಗೆ ಅನ್ನಪ್ರಸಾದ ವಿತರಿಸುವ ಮೂಲಕ ಆಚರಿಸಲಾಯಿತು. ಸಾವಿರಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಅತಿಥಿಯಾಗಿದ್ದ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಮಾತನಾಡಿ, ಸಾಹಸಸಿಂಹ ವಿಷ್ಣುವರ್ಧನ್ ಅವರು ನಮ್ಮನ್ನಗಲಿ 15 ವರ್ಷವಾದರೂ ಹುಬ್ಬಳ್ಳಿಯಲ್ಲಿ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಗಮನ ಹರಿಸಿಲ್ಲ. ಮುಂದಿನ ದಿನಗಳಲ್ಲಿ ವಿಷ್ಣು ಸೇನಾ ಜತೆ ಸಮಸ್ತ ಕನ್ನಡ ಪರ ಸಂಘಟನೆಗಳು ಜೊತೆಯಾಗಿ ನಿಂತು ಈ ಕುರಿತು ಗಂಭೀರ ಚಿಂತನೆ ನಡೆಸಲಾಗುವುದು ಎಂದರು.
ಸಮಿತಿಯ ಜಿಲ್ಲಾಧ್ಯಕ್ಷ ಮೃತ್ಯುಂಜಯ ಹಿರೇಮಠ ಮಾತನಾಡಿ, ಕನ್ನಡದ ಸಾಧಕರನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕರುನಾಡ ವಿಜಯ ಸೇನೆ ಧಾರವಾಡ ಜಿಲ್ಲಾಧ್ಯಕ್ಷ ಕುಮಾರ ಲಕ್ಕಮ್ಮನವರ, ಕಾರ್ಯಾಧ್ಯಕ್ಷ ರಾಮು ಹಳ್ಳಿಕೇರಿ, ಜೈಂಟ್ಸ್ ಗ್ರೂಪ್ ಅಧ್ಯಕ್ಷ ದಿವಾನಸಾಬ್ ನದಾಫ್, ಆಟೋ ಚಾಲಕರ ಸಂಘದ ಹನುಮಂತಪ್ಪ ಪವಾಡಿ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಇತರರು ಉಪಸ್ಥಿತರಿದ್ದರು.
ದೇವರಾಜ ಗೌಡರ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಉಪಾಧ್ಯಕ್ಷ ಮಂಜುನಾಥ ಸಿಂಗ್ ಭವಾನಿ ವಂದಿಸಿದರು.
ಆಟೋ ಚಾಲಕರು ಹಾಗೂ ಸಮಿತಿಯ ಪದಾಧಿಕಾರಿಗಳಾದ ಶಂಭು ಪೂಜಾರ, ರಿಯಾಜ ಅಹ್ಮದ್, ಮಹಾದೇವ ಮಾರಡಗಿ, ಪ್ರಕಾಶ ಹುಚ್ಚಣ್ಣವರ, ಗುರು ತಳವಾರ, ಪ್ರಮೋದ ನಾಝರೆ, ಚಿದಾನಂದ ಅಂಗಡಿ, ಅನಂದ, ನಾಗರಾಜ ಮದನಬಾವಿ ಇತರರು ಸಹಯೋಗ ನೀಡಿದ್ದರು.