ವಿಷ್ಣು ಸಮುದ್ರ ಕೆರೆ ಏರಿ ಈಗ ಸ್ವಚ್ಛ

13blrp1.
Published on


ಬೇಲೂರು : ಪಟ್ಟಣದ ಬಿಕ್ಕೋಡು ರಸ್ತೆಯ ವಿಷ್ಣು ಸಮುದ್ರ(ಬಿಷ್ಟಮ್ಮನ)ಕೆರೆ ಏರಿಯ ರಸ್ತೆ ಬದಿಯಲ್ಲಿ ಕೋಳಿ, ಕುರಿ ಸೇರಿದಂತೆ ಅಳಿದುಳಿದ ತ್ಯಾಜ್ಯ ವಸ್ತುಗಳನ್ನು ಹಾಕುವುದರಿಂದ ನಾಗರಿಕರು ಮೂಗು ಮುಚ್ಚಿ ಓಡಾಡುತ್ತಿರುವ ಬಗ್ಗೆ ಕೆಲ ದಿನಗಳ ಹಿಂದೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಪರಿಣಾಮ ಪುರಸಭೆ ಸಿಬ್ಬಂದಿ ಸ್ಥಳ ಸ್ವಚ್ಛಗೊಳಿಸಿದ್ದಾರೆ.


ಪತ್ರಿಕೆಯೊಂದಿಗೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಬಿಕ್ಕೋಡು ರಸ್ತೆಯ ವಿಷ್ಣು ಸಮುದ್ರ(ಬಿಷ್ಟಮ್ಮನ)ಕೆರೆ ಏರಿಯ ರಸ್ತೆ ಬದಿಯಲ್ಲಿ ತ್ಯಾಜ್ಯ ಮತ್ತು ಇತರೆ ಅಶುಚಿತ್ವಕ್ಕೆ ಕಾರಣವಾಗುವ ವಸ್ತುಗಳನ್ನು ತಂದು ಸುರಿಯುತ್ತಿರುವ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಮೂಲಕ ನಮ್ಮ ಗಮನ ಸೇಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಯಿಂದ ತ್ಯಾಜ್ಯವನ್ನೆಲ್ಲ ತೆಗೆದು ಸ್ವಚ್ಛ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.


ಅಲ್ಲದೆ ಎಲ್ಲೆಂದರಲ್ಲಿ ಕಸ ಹಾಕದೆ ಅಂಗಡಿ ಮುಂಗಟ್ಟು ಹಾಗೂ ಮನೆ ಮುಂದೆ ಬರುವ ವಾಹನಕ್ಕೆ ಒಣ ಮತ್ತು ಹಸಿ ಕಸ ಬೇರ್ಪಡಿಸಿ ಹಾಕುವಂತೆ ಈಗಾಗಲೆ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನದಡಿ ಅರಿವು ಮೂಡಿಲಾಗಿದೆ. ಆದರೂ ಕೆಲವರು ಯಾರೂ ಇಲ್ಲದ ಸಮಯದಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ತ್ಯಾಜ್ಯವೆಲ್ಲ ಕೊಳೆತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲೆಂದರಲ್ಲಿ ಕಸ ಹಾಕದಂತೆ ನಾಮ ಫಲಕ ಅಳವಡಿಸಿ ಕೆಲವರಿಗೆ ದಂಡವಿಧಿಸಿದ್ದರೂ, ಇನ್ನೂ ಕೆಲವರು ಕಸವನ್ನು ಯಾರಿಗೂ ಗೊತ್ತಾಗದಂತೆ ಬೇರೆಡೆಯಿಂದ ತಂದು ಹಾಕುತಿದ್ದಾರೆ. ಕಸ ಹಾಕುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಹೆಸರನ್ನು ಗೌಪ್ಯವಾಗಿಟ್ಟು ಕಸ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ಹರೀಶ್ ಸೇರಿದಂತೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net