ಹುಬ್ಬಳ್ಳಿ: ಕಲಿಯುಗದಲ್ಲಿ ತಪಸ್ಸು ಎಂದರೆ ಅದು ಭಗವಂತನ ನಾಮಸ್ಮರಣೆಯಾಗಿದೆ. ಈ ನಿಟ್ಟಿನಲ್ಲಿ ಭಗವತ್ ಭಕ್ತರ ಸಂಘಟನೆಯು ಕಳೆದ 20 ವರ್ಷಗಳಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತ ಬಂದಿದೆ. ನಮ್ಮ ಭಾರತವು ವಿಶ್ವಗುರು ಆಗಬೇಕೆಂಬ ಸಂಕಲ್ಪದೊಂದಿಗೆ ನಗರದ ವಿವಿಧ ಗುಡಿ, ಭಕ್ತರ ಮನೆಗಳಲ್ಲಿ ಸಾಮೂಹಿಕ ಪಾರಾಯಣ ಮಾಡುತ್ತ ಬರಲಾಗಿದೆ.
ಕೀರ್ತಿಶೇಷರಾದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥರ ಆಶೀರ್ವಾದದೊಂದಿಗೆ, ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಮಾರ್ಗದರ್ಶನದಲ್ಲಿ, "ಎಲ್ಲರ ಮನೆ ಮತ್ತು ಮನಗಳಲ್ಲಿ ವಿಷ್ಣು ಸಹಸ್ರನಾಮ' ಎಂಬ ಧ್ಯೇಯದೊಂದಿಗೆ 2023ರ ಜುಲೈ 28ರಂದು ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಶನ್ ಸಂಸ್ಥೆಯ ಹುಬ್ಬಳ್ಳಿ ವಿಭಾಗವನ್ನು ಆರಂಭಿಸಲಾಗಿದೆ.
ಕನಿಷ್ಠ 11 ಭಕ್ತರು ಭಗವಂತನ ಸಾನ್ನಿಧ್ಯ ಇರುವ ಒಂದೆಡೆ ಸೇರಿ, ನಿರ್ದಿಷ್ಟ ಸಮಯದಲ್ಲಿ, ಸತತವಾಗಿ 11 ಬಾರಿ, 11 ದಿನಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತ, ಇಂತಹ 11 ಆವೃತ್ತಿಗಳ, ನಾರಾಯಣ ಚಕ್ರ ಎಂಬ ಸರಣಿಯನ್ನು ಭಗವಂತನ ಪ್ರೇರಣೆಯಿಂದ ಸಂಪನ್ನಗೊಳಿಸಲಾಗಿದೆ.
ಈ ಸಾಮೂಹಿಕ ಪಾರಾಯಣ ವನ್ನು ಭಗವಂತನ ಪಾದಗಳಿಗೆ ಅರ್ಪಿಸುವ ಕೃಷ್ಣಾರ್ಪಣಮ್ ಕಾರ್ಯಕ್ರಮ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಜುಲೈ 21ರಂದು ಮುಂಜಾನೆ 8.30ರಿಂದ ಆರಂಭವಾಗಲಿದೆ.
ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಶನ್ ಹುಬ್ಬಳ್ಳಿ ವಿಭಾಗದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಯುವ ಸಮಾವೇಶವನ್ನು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಯುವ ಜನರಿಗೆ ನಮ್ಮ ರಾಷ್ಟ್ರ, ಧರ್ಮದ ಶಕ್ತಿಯನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಯುವ ಸಮಾವೇಶವನ್ನು ಆಯೋಜಿಸಲಾಗಿದೆ.
ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರು "ವಿಷ್ಣು ಸಹಸ್ರನಾಮದ ಪ್ರವಾಹ, ದೇಹದ ಮೇಲೆ ಪ್ರಭಾವ' ಎಂಬ ವಿಷಯದ ಮೇಲೆ ಹಾಗೂ ಕಾರ್ಕಳದ ಪ್ರಚಂಡ ವಾಗ್ಮಿ, ರಾಷ್ಟ್ರ ಪ್ರೇಮಿ ಆದರ್ಶ ಗೋಖಲೆ ಅವರು ವಿಶ್ವಗುರು ಭಾರತ ಎಂಬ ವಿಷಯವಾಗಿ ರಾಷ್ಟ್ರೀಯ ಚಿಂತನೆ ನೀಡಲಿದ್ದಾರೆ.
ಸಮಾಜದ ಎಲ್ಲ ಬಂಧುಗಳು, ತಮ್ಮ ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿ, ರ್ಪೂಣ ಪ್ರಯೋಜನ ಪಡೆದುಕೊಳ್ಳಬೇಕು.
ಅದೇ ದಿನ ಸಂಜೆ 5.30ರಿಂದ ಯುವ ಗಾಯಕ, ವಿಭಿನ್ನ ರೀತಿಯ ಸಂಗೀತಕ್ಕೆ ಹೆಸರಾದ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಡಾ. ಪಂಡಿತ ಸತ್ಯಮೂರ್ತಿ ಆಚಾರ್ಯ, ಅಧ್ಯಕ್ಷರು, ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಶನ್ ಹುಬ್ಬಳ್ಳಿ, ಮೊ. 9448730183 ಇವರನ್ನು ಸಂಪಕಿರ್ಸಬಹುದು.