ದೇಶದ ಸಮೃದ್ಧಿಗಾಗಿ ಹುಬ್ಬಳ್ಳಿಯಲ್ಲಿ 1008 ಭಕ್ತರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ

Published on

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪುನರ್ ಪ್ರತಿಷ್ಠಾಪನೆಯ ದಿನವಾದ ಜನವರಿ 22ರಂದು, ಕೀರ್ತಿಶೇಷರಾದ ಪೇಜಾವರ ಶ್ರೀವಿಶ್ವೇಶ ತೀರ್ಥ ಶ್ರೀಪಾದಂಗಳವರ ಸಂಕಲ್ಪದಂತೆ ಇಲ್ಲಿಯ ದೇಶಪಾಂಡೆನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ದಿವ್ಯ ಶ್ರೀರಾಮೋತ್ಸವ ಹಮ್ಮಿಕೊಳ್ಳಲಾಗಿದೆ.

ರಾಮಚಂದ್ರಾಪುರ ಮಹಾಸಂಸ್ಥಾನದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಶನ್ ಮತ್ತು ಶ್ರೀ ಹನುಮಾನ್ ಪರಿವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಸಹಕಾರದೊಂದಿಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಏರ್ಪಡಿಸಲಾಗಿದೆ.

ಜ. 22ರಂದು ಬೆಳಗ್ಗೆ 7ಕ್ಕೆ ರಾಮ ತಾರಕ ಯಾಗದೊಂದಿಗೆ ಆರಂಭವಾಗುವ ಈ ಉತ್ಸವದಲ್ಲಿ ಪೂರ್ಣಾಹುತಿ, ಶೋಭಾಯಾತ್ರೆ ಮುಂತಾದ ಕಾರ್ಯಕ್ರಮಗಳು ಜರುಗುವವು. ಧಾರವಾಡದ ಪ್ರಭು ಪ್ರಸಾದನ ತಂಡದವರ ರಾಮ ಸಂಕೀರ್ತನೆ ನಡೆಯುವದು.

ಬೆಳಗ್ಗೆ 10ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರು ಪ್ರವಚನ ನೀಡುವರು. ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮೀ ವಿಜಯಾನಂದ ಸರಸ್ವತಿ ಮಹಾರಾಜರು ಆಶೀರ್ವಚನ ನೀಡುವರು.

ಹರಿಕಥಾ ಕ್ಷೇತ್ರದ ಪರಮ ರಾಮ ಭಕ್ತರಾದ ಶಿರಸಿಯ ನಾರಾಯಣ ದಾಸರಿಗೆ "ಮರ್ಯಾದಾ ಪುರುಷೋತ್ತಮ ಕಥಾ ಶಿರೋಮಣಿ' ಬಿರುದು ನೀಡಿ ಗೌರವಿಸಲಾಗುವುದು.

11.30ಕ್ಕೆ ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರಪ್ರಸಾರದೊಂದಿಗೆ, ಸಾಮೂಹಿಕ ರಾಮ ತಾರಕ ಜಪ, ಹನುಮಾನ್ ಚಾಲೀಸಾ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಶ್ರೀರಾಮದೇವರ ಪ್ರಸಾದ ವಿತರಣೆ ಮಾಡಲಾಗುತ್ತದೆ.

ಶ್ರೀ ಗೀತಾ ರಾಮಾಯಣ: ಗೋಸೇವಾ ವಿಧಿ ಧಾರವಾಡ ವಿಭಾಗದ ಪ್ರಾಯೋಜಕತ್ವದಲ್ಲಿ ಸಂಜೆ 5.30ಕ್ಕೆ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮ ಶ್ರೀ ಗೀತಾ ರಾಮಾಯಣ ಏರ್ಪಡಿಸಲಾಗಿದೆ.

ಕಡತೋಕ ಶ್ರೀಪಾದ ಭಟ್ ಮತ್ತು ಸಂಗಡಿಗರು ಗಾನ ರೂಪದಲ್ಲಿ ರಾಮಾಯಣ ಪ್ರಸ್ತುತಪಡಿಸುವರು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಗವತ್ ಭಕ್ತರು ಭಾಗವಹಿಸಿ ದೇಶದ ಸಮೃದ್ಧಿಗಾಗಿ ಪಾರಾಯಣ ಹಾಗೂ ಪ್ರಾರ್ಥನೆ ಮಾಡಬೇಕೆಂದು ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಶನ್ ಅಧ್ಯಕ್ಷ ಪಂ. ಡಾ. ಸತ್ಯಮೂರ್ತಿ ಆಚಾರ್ಯ ಅವರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net