ವಿಷ್ಣು ಅಭಿಮಾನಿಗಳಿಂದ ಮೈಸೂರಿನಲ್ಲಿ ಪ್ರತಿಭಟನೆ

37
Published on

ಮೈಸೂರು: ಬೆಂಗಳೂರಿನಲ್ಲಿ ವಿಷ್ಣು ಅಂತ್ಯಸಂಸ್ಕಾರ ನಡೆದಿದ್ದ ಮಂಟಪ ಧ್ವಂಸಗೊಳಿಸಿದ್ದನ್ನು ಖಂಡಿಸಿ ನಗರದಲ್ಲಿ ಸೋಮವಾರ ಪೌರಕಾರ್ಮಿಕರು ಸೇರಿದಂತೆ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಅರಮನೆ ಉತ್ತರದ್ವಾರದ ಬಳಿ ಇರುವ ಡಾ.ವಿಷ್ಣುವರ್ಧನ್ ಉದ್ಯಾನದ ಮುಂಭಾಗ ಪ್ರತಿಭಟನೆ ನಡೆಸಿ, ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಂಸ್ಕಾರ ಮಂಟಪವನ್ನು ಧ್ವಂಸ ಮಾಡಿರುವುದು ಖಂಡೀನಿಯ ಎಂದು ವಿರೋಧಿಸಿದರು.

ಪೌರಕಾರ್ಮಿಕ ಮಹದೇವ್ ಮಾತನಾಡಿ, ವಿಷ್ಣುವರ್ಧನ್ ಅವರ ಸಂಸ್ಕಾರ ಮಂಟಪ ಸರಿಪಡಿಸಬೇಕು ಎಂದು ಸರ್ಕಾರಕ್ಕೆ ವಿನಂತಿಸುತ್ತೇವೆ. ಈ ಮೂಲಕ ಕಲಾವಿದರಿಗೆ ಗೌರವ ನೀಡಬೇಕು. ಇಲ್ಲವಾದರೆ ಸ್ವಚ್ಛತಾ ಕೆಲಸವನ್ನು ಬಹಿಷ್ಕರಿಸಬೇಕಾಗುತ್ತದೆ ಎಂದರು.

ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಮಾತನಾಡಿ, ವಿಷ್ಣುವರ್ಧನ್ ಸಮಾಧಿ ಜಾಗವನ್ನು ಕೆಲವರು ತಮ್ಮ ಭೂಮಿ ಎಂದು ಹೇಳಿಕೊಂಡು, ರಾತ್ರೋರಾತ್ರಿ ಧ್ವಂಸ ಮಾಡಿರುವುದು ಲಕ್ಷಾಂತರ ಅಭಿಮಾನಿಗಳಿಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಪ್ರತೀಕವಾಗಿ ಆ ಸ್ಥಳವನ್ನು ಅಭಿವೃದ್ಧಿಪಡಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಭೂಮಿಯನ್ನು ತಕ್ಷಣ ಸ್ವಾಧೀನಪಡಿಸಿಕೊಂಡು ಮಾಲೀಕರಿಗೆ ನಿಯಮಾನುಸಾರ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್. ರಾಜೇಶ್, ಮುಖಂಡರಾದ ಸಂತೋಷ್, ಕರುಣಾಮಯಿ, ಮುರುಗೇಶ್, ಪ್ಯಾಲೇಸ್ ಮಹದೇವ್, ಗೋಪಾಲ್, ಪಳನಿ, ಎಂ ಪಿ ಮುರುಗೇಶ್, ಮಹದೇವ, ವಿಜಯ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net