ಕೊಳ್ಳೇಗಾಲದಲ್ಲಿ ವಿಷ್ಣು ಅಭಿಮಾನಿಗಳ ಪ್ರತಿಭಟನೆ

20-KGL-1,,,,
Published on

ಕೊಳ್ಳೇಗಾಲ: ಚಿತ್ರನಟ ದಿ.ವಿಷ್ಣುವರ್ಧನ್ ಅವರ ಸಮಾಧಿ ತೆರವು ಮಾಡಿರುವುದನ್ನು ಖಂಡಿಸಿ ಬುಧವಾರ ಪಟ್ಟಣದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಬಳಿಕ ಪ್ರಮುಖ ರಸ್ತೆಗಳಲ್ಲಿ ಸಾಗಿ ಧಿಕ್ಕಾರ ಕೂಗುವ ಮೂಲಕ ಅಕ್ರೋಶ ಹೊರಹಾಕಿದರು. ನಂತರ ತಾಲೂಕು ಕಚೇರಿ ತಲುಪಿ ತಹಸೀಲ್ದಾರ್ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.

ಭಾರತೀಯ ಚಿತ್ರ ರಂಗದಲ್ಲಿ ಹೆಸರಾಂತ ಕಲಾವಿದ ಅನಿಸಿಕೊಂಡಿದ್ದ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಏಕಾಏಕಿ ತೆರವುಗೊಳಿಸಿರುವುದು ಕೋಟ್ಯಂತರ ಅಭಿಮಾನಿಗಳಿಗೆ ಗಾಸಿ ಉಂಟು ಮಾಡಿದೆ. ಕನ್ನಡ ಚಿತ್ರ ರಂಗಕ್ಕೆ ವಿಷ್ಣುವರ್ಧನ್ ಅವರ ಅಪಾರಕೊಡುಗೆ ಇದೆ. ಇಂತಹ ಮೇರು ಕಲಾವಿಧನ ಸ್ಮಾರಕಕ್ಕೆ ಗೌರವ ಕೊಡಬೇಕಿತ್ತು. ಸರ್ಕಾರ ಬೇರೆ ಕಡೆ ಜಾಗ ಕೊಡುವ ಮಾತುಗಳು ಕೇಳಿ ಬರುತ್ತಿದೆ. ನಮಗೆ ಅದು ಬೇಡ, ಕೆಡುವಿರುವ ಸ್ಥಳದಲ್ಲಿಯೇ ಮತ್ತೆ ಸ್ಮಾರಕ ನಿರ್ಮಿಸಬೇಕು. ಈ ಹೋರಾಟ ಇಂದಿಗೆ ನಿಲ್ಲುವುದಿಲ್ಲ ಎಂದು ಅಭಿಮಾನಿ ಲೋಕೇಶ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಾದ ಜಿಪಂ ಮಾಜಿ ಸದಸ್ಯ ಮುಳ್ಳೂರು ಕಮಲ್, ಲೋಕೇಶ್, ಮೋಳೆ ಸ್ವಾಮಿ, ಸುರೇಶ್, ಕರವೇ ಪ್ರವೀಣ್ ಶೆಟ್ಟಿ ಬಣ ಅಧ್ಯಕ್ಷ ಜಗದೀಶ್ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸಿ.ಚಂದನ್, ರೈತ ಸಂಘದ ಬಸವರಾಜು, ರವಿವರ್ಧನ್, ಮಹೇಶ್, ಶಾಂತರಾಜು, ಫಾಯಿಕ್, ಸುಂದರ್, ಕಾಂತರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net