

ಬೇಲೂರು: ವಿಶ್ವ ವಿಖ್ಯಾತ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಭಾನುವಾರ ರಾತ್ರಿ ವಿಷ್ಣು ದೀಪೋತ್ಸವವನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಇದರ ಅಂಗವಾಗಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇಗಲದಲ್ಲಿ ಪ್ರತಿ ವರ್ಷ ಕೃತಿಕಾ ನಕ್ಷತ್ರದ ಹುಣ್ಣಿಮೆ ದಿನ ವಿಷ್ಣು ದೀಪೋತ್ಸವ ಆಚರಿಸುವ ವಾಡಿಕೆ ಇದೆ. ಆದರೆ ಪ್ರಸಕ್ತ ವರ್ಷ ಶೂನ್ಯ ಮಾಸದ ಹಿನ್ನೆಲೆಯಲ್ಲಿ ಈ ಭಾರಿ ಕಾರ್ತಿಕ ಕಳೆದ ಬಳಿಕ ಹುಣ್ಣಿಮೆ ದಿನದಂದು ವಿಷ್ಣು ದೀಪೋತ್ಸವ ನೆರವೇರಿತು. ದೀಪೋತ್ಸವ ಅಂಗವಾಗಿ ದೇಗುಲವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅಲ್ಲದೆ ದೇಗುಲ ಆವರಣ ಬಣ್ಣ-ಬಣ್ಣದ ರಂಗೋಲಿಯಿಂದ ಸಿಂಗರಿಸಲಾಗಿತ್ತು. ಮಣ್ಣಿನ ದೀಪಗಳನ್ನು ಹಚ್ಚಿ ಭಕ್ತರು ಭಕ್ತಿ ಸಮರ್ಪಿಸಿದರು.
ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ನಡೆಯುವ ವಿಷ್ಣು ದೀಪೋತ್ಸವಕ್ಕೆ ಆರು ಶತಮಾನಗಳ ಐತಿಹಾಸಿಕ ಹಿನ್ನೆಲೆ ಇದೆ. ವಿಜಯನಗರದ ಅರಸರ ಕಾಲದಲ್ಲಿ ನಿರ್ಮಿಸಿದ್ದ 40 ಅಡಿ ಎತ್ತರದ ಕಲ್ಲಿನ ದೀಪಸ್ತಂಭದಲ್ಲಿ ಘಟದೀಪ ಸ್ಥಾಪಿಸಲಾಗುತ್ತಿತ್ತು. ದೀಪ ಸ್ತಂಭದ ಸಂರಕ್ಷಣೆ ದೃಷ್ಟಿಯಿಂದ ಸ್ತಂಭದ ಮೇಲೆ ಘಟದೀಪ ಸ್ಥಾಪಿಸುವುದನ್ನು ಇತ್ತೀಚಿನ ವರ್ಷಗಳಿಂದ ಸ್ಥಗಿತಗೊಳಿಸಿದ್ದು, ಅರ್ಚಕರೇ ಘಟದೀಪವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಜತೆಗೆ ಶ್ರೀ ಚನ್ನಕೇಶವಸ್ವಾಮಿ ಉತ್ಸವಮೂರ್ತಿಯನ್ನು ಈ ದೀಪ ಸ್ತಂಭದ ಸುತಲೂ ಪ್ರದಕ್ಷಿಣೆ ಹಾಕಿಸಿ ನಂತರ ಗರುಡ ಕಂಬದ ಸಮೀಪ ಇರಿಸಿ, ಪೂಜೆ ಸಲ್ಲಿಸಲಾಯಿತು. ರಾಜಗೋಪುರದ ಬಾಗಿಲಿನಲ್ಲಿ ಅರ್ಚಕರಿಂದ ಘಟದೀಪದಿಂದ ಬೆಂಕಿ ಹತ್ತಿಸಿ ತೈಲ(ಎಣ್ಣೆ)ಹಚ್ಚಿದ ಬಿಳಿ ಬಟ್ಟೆಯನ್ನು ಸುಡಲಾಯಿತು. ಸುಟ್ಟ ಬಟ್ಟೆಯ ಭಸ್ಮವನ್ನು ಭಕ್ತರು ಪ್ರಸಾದ ರೂಪದಲ್ಲಿ ಪಡೆದರು.
ದೀಪೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆಯಿಂದ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟರ್, ನರಸಿಂಹ ಭಟ್ಟರ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಹೋಮ-ಹವನ ನಡೆಸಲಾಯಿತು. ಅಲ್ಲದೆ ದೇಗುಲದ ಮೂಲಮೂರ್ತಿಗೆ ಘಟ ದೀಪದಿಂದ ವಿಶೇಷ ಮಂಗಳಾರತಿ ನಡೆಸಿ, ಅರ್ಚಕರೊಬ್ಬರು ಘಟದೀಪವನ್ನು ಹೊತ್ತು ಸಾಗುವ ಮೂಲಕ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು.
ಶ್ರೀ ಚನ್ನಕೇಶವಸ್ವಾಮಿ ದೇಗುಲದ ಇಒ ಯೋಗೀಶ್, ದೇಗುಲ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿಶಂಕರ್, ರವೀಂದ್ರ, ವಿದ್ಯಾ ವಿಕಾಶ ಶಿಕ್ಷಣ ಸಂಸ್ಥೆಯ ರಂಗನಾಥ್ ಇತರರಿದ್ದರು.