ನ. 5ರಂದು ವಿಶ್ವ ಕೊಂಕಣಿ ಸಮಾರೋಹ

GURUDUTH KAMATH
GURUDUTH KAMATH
Published on



ಮಂಗಳೂರು : ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನ.5 ಮತ್ತು 6ರಂದು ವಿಶ್ವ ಕೊಂಕಣಿ ಸಮಾರೋಹ ಹಾಗೂ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.
ನ. 5ರಂದು ಬೆಳಗ್ಗೆ 9.30ಕ್ಕೆ ವಿಶ್ವ ಕೊಂಕಣಿ ಸಮಾರೋಹ ಕಾರ್ಯಕ್ರಮವನ್ನು ಮಣಿಪಾಲದ ಮಾಹೆಯ ಕುಲಾಧಿಪತಿ ಡಾ. ದಿಲೀಪ್. ಜಿ. ನಾಯಕ್ ಉದ್ಘಾಟಿಸಲಿದ್ದಾರೆ. ಚಿತ್ರನಟಿ ಪಂಢರಿಬಾಯಿ ಅವರ ಭಾವಚಿತ್ರವನ್ನು ಕೊಂಕಣಿ ಕೀರ್ತಿಮಂದಿರದಲ್ಲಿ ಅನಾವರಣಗೊಳಿಸಲಾಗುವುದು ಎಂದು ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 11ಕ್ಕೆ ನಡೆಯುವ ‘ಸ್ವಾತಂತ್ರೊೃೀೀತ್ತರ ಭಾರತದ ಶಿಕ್ಷಣದಲ್ಲಿ ಕೊಂಕಣಿ ‘ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಉಡುಪಿಯ ಶಿಕ್ಷಣಾಧಿಕಾರಿ ಡಾ. ಆಶೋಕ ಕಾಮತ್ ವಹಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಕೊಂಕಣಿ ಸಾಹಿತ್ಯದಲ್ಲಿ ಹಾಸ್ಯಪ್ರಜ್ಞೆ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಎಚ್.ಎಂ. ಪೆರ್ನಾಲ್ ವಹಿಸಲಿದ್ದಾರೆ. ಸಾಯಂಕಾಲ 4ರಿಂದ 6ರವರೆಗೆ ಮಲ್ಲಿಕಾರ್ಜುನ ಜಾನಪದ ಕಲಾ ತಂಡದಿಂದ ಕುಡುಬಿ ಗುಮ್ಮಟ ನೃತ್ಯ ಪ್ರದರ್ಶನ, ವಿದ್ಯಾರಂಗ ಮಿತ್ರ ಮಂಡಳಿ ಖಾರ್ವಿಕೇರಿ ಕುಂದಾಪುರ ತಂಡದಿಂದ ಸಾಂಪ್ರದಾಯಿಕ ಹೋಳಿ ನೃತ್ಯ, ಕಟಂಗಲ್ ದಾದಾ ಪೊಂಡಾ ಪಂಗಡದವರಿಂದ ದಿವಲಿ ನಾಚ್ ನೃತ್ಯ ಕಲಾ ಪ್ರದರ್ಶನಗೊಳ್ಳುಲಿದೆ ಎಂದು ಅವರು ತಿಳಿಸಿದರು.
ನ. 6ರಂದು ಬೆಳಗ್ಗೆ 10ಕ್ಕೆ ನಡೆಯುವ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಗೋವಾದ ಉದ್ಯಮಿ ಅವಧೂತ್ ತಿಂಬ್ಲೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪ್ರಶಸ್ತಿಯನ್ನು ಗೋವಾದ ಹಿರಿಯ ಕೊಂಕಣಿ ಚಿಂತಕ ಮೌಜಿನ್ಹೊ ದೆ ಅಟೈಡೆ ಅವರಿಗೆ, ಅತ್ಯುತ್ತಮ ಕೊಂಕಣಿ ಕವಿತಾ ಕೃತಿಗೆ ನೀಡಲಾಗುವ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಗೋವಾದ ಕೊಂಕಣಿ ಕವಿ ಪ್ರಕಾಶ ಡಿ. ನಾಯಕ್ ಅವರ ಮೊಡಕೂಳ್ ಎಂಬ ಕವಿತಾ ಕೃತಿಗೆ , ಬಸ್ತಿ ವಾಮನ ಶಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು ಮುಂಬೈನ ವೀಣಾ ಅಡಿಗೆ ಅವರಿಗೆ, ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರದ ಸಂಘ ಸಂಸ್ಥೆ ವಿಭಾಗದಲ್ಲಿ ಮಂಗಳೂರಿನ ಸೇವಾ ಭಾರತಿ ಸಂಸ್ಥೆಗೆ ಪ್ರದಾನ ಮಾಡಲಾಗುವುದು . ಮಧ್ಯಾಹ್ನ 2ಕ್ಕೆ ಕಾಸರಗೋಡು ಚಿನ್ನಾ ಹಾಗೂ ಎಚ್. ಸತೀಶ ನಾಯಕ್ ಅವರಿಂದ ಮನಾಂತರಂಗ ಎಂಬ ಕೊಂಕಣಿ ಹಾಸ್ಯ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪೈ, ಕೋಶಾಧಿಕಾರಿ ಬಿ.ಆರ್. ಭಟ್, ವಿಶ್ವಸ್ಥ ಮಂಡಳಿಯ ರಮೇಶ್ ನಾಯಕ್,ದೇವದಾಸ ಪೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net