

ಉಡುಪಿ: ಪತ್ನಿ ವಿಶಾಲಾ ಗಾಣಿಗ ಅವರನ್ನು ರಾಮಕೃಷ್ಣ ಗಾಣಿಗ ಕೊಲೆ ಮಾಡಬೇಕೆಂದು ಆರು ತಿಂಗಳಿನಿಂದ ಸಂಚು ರೂಪಿಸಿದ್ದ ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬ್ರಹ್ಮಾವರ ಉಪ್ಪಿನಕೋಟೆ ಅಪಾರ್ಟ್‌ಮೆಂಟ್‌ನಲ್ಲಿ ಜು.12ರಂದು ಸಂಭವಿಸಿದ ವಿಶಾಲಾ ಗಾಣಿಗ (35) ಕೊಲೆ ಪ್ರಕರಣವನ್ನು 10 ದಿನಗಳೊಳಗೆ ಭೇದಿಸಲಾಗಿದ್ದು, ದಂಪತಿ ನಡುವಣ ವೈಮನಸ್ಸೇ ಕೊಲೆಗೆ ಕಾರಣ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಮಕೃಷ್ಣ ಗಾಣಿಗ ಮತ್ತು ಸುಪಾರಿ ಕಿಲ್ಲರ್ ಉತ್ತರ ಪ್ರದೇಶದ ಸ್ವಾಮಿನಾಥ ನಿಶಾದ(38)ನನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.
ರಾಮಕೃಷ್ಣ ಗಾಣಿಗ ಹಲವು ವರ್ಷಗಳಿಂದ ದುಬೈನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಪತ್ನಿಯ ಕೊಲೆಗೆ ಆತ ದುಬೈನಲ್ಲಿದ್ದುಕೊಂಡೇ 6 ತಿಂಗಳಿನಿಂದ ಸಂಚು ರೂಪಿಸಿದ್ದ. ಅದರಂತೆ ಮೂರು ತಿಂಗಳ ಹಿಂದೆ ದುಬೈನಿಂದ ಪತ್ನಿ ಮಗು ಜತೆ ಊರಿಗೆ ಆಗಮಿಸಿದ್ದಾಗ, ಸುಪಾರಿ ಕಿಲ್ಲರ್‌ಗಳನ್ನು ಸ್ನೇಹಿತರು ಎಂದು ಪತ್ನಿಗೆ ಪರಿಚಯಿಸಿದ್ದ. ಬಳಿಕ ದುಬೈಗೆ ದಂಪತಿ ವಾಪಸ್ ಹೋಗಿದ್ದರು. ಕೃತ್ಯ ನಡೆಸುವ ಸಲುವಾಗಿ ಇತ್ತೀಚೆಗೆ ಮಗು ಜತೆಗೆ ವಿಶಾಲ ಅವರನ್ನು ಊರಿಗೆ ಕಳಿಸಿದ್ದ ಎಂದು ಎಸ್‌ಪಿ ವಿವರಣೆ ನೀಡಿದರು.
ಪತ್ನಿಯನ್ನು ಕೊಲೆ ಮಾಡುವ ಸಲುವಾಗಿ ಆರೋಪಿ ರಾಮಕೃಷ್ಣ ಸುಪಾರಿ ಕಿಲ್ಲರ್‌ಗಳಿಗೆ 2 ಲಕ್ಷ ರೂ.ಗೂ ಅಧಿಕ ಹಣವನ್ನು ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.
50 ಸಾವಿರ ಬಹುಮಾನ: ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಸಿಪಿಐ ಗುರುನಾಥ ಬಿ.ಹಾದಿಮನಿ, ಜಿಲ್ಲಾ ಪೊಲೀಸ್ ಕಚೇರಿ ಆರ್‌ಡಿಸಿ ತಾಂತ್ರಿಕ ತಂಡ, ಮಲ್ಪೆ ಸಿಪಿಐ ಶರಣ ಗೌಡ, ಪಿಎಸ್‌ಐ ಮಧು, ಕಾರ್ಕಳ ಸಿಪಿಐ ಸಂಪತ್‌ಕುಮಾರ್, ಪಿಎಸ್‌ಐ ರಾಘವೇಂದ್ರ ಸಿ, ಶ್ರೀಧರ ನಾಯ್ಕ, ಮಣಿಪಾಲ ಇನ್ಸ್‌ಪೆಕ್ಟರ್ ಮಂಜುನಾಥ್, ಪಿಎಸ್‌ಐ ರಾಜಶೇಖರ ವಂದಲಿ ನೇತೃತ್ವದ ತಂಡ ಕಾರ್ಯನಿರ್ವಹಣೆ ಪ್ರಶಂಸಾರ್ಹ.
ಸಣ್ಣ ಸುಳಿವು, ಯಾವುದೇ ಸಾಕ್ಷೃವಿಲ್ಲದ ಪ್ರಕರಣ ಇದಾಗಿದ್ದು, ಆರೋಪಿಗಳ ಪತ್ತೆ ಸವಾಲಿನ ವಿಚಾರವಾಗಿತ್ತು. 10 ದಿನದ ಒಳಗೆ 5 ವಿಶೇಷ ತನಿಖಾ ತಂಡಗಳು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಎಸ್‌ಪಿ ತಿಳಿಸಿದರು. ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಟಿಲ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ತನಿಖಾ ತಂಡಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ಸೂದ್ 50 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ ಎಂದು ತಿಳಿಸಿದರು.
ಇಂಟರ್ನೆಟ್ ಕರೆಯ ಸುಳಿವು: ಪತ್ನಿಯ ಕೊಲೆಯಲ್ಲಿ ಯಾವುದೇ ಸುಳಿವು ಸಿಗದಂತೆ ವ್ಯವಸ್ಥಿತ ಸಂಚು ರೂಪಿಸಿದ್ದರೂ ಒಂದು ಎಳೆ ಆತನ ಕೈತಪ್ಪಿತ್ತು. ಕೊಲೆ ನಡೆದ ಬಳಿಕ ಪೊಲೀಸರಿಗೆ ಯಾವುದೇ ಸಣ್ಣ ಸುಳಿವು-ಸಾಕ್ಷೃಗಳೂ ಸಿಕ್ಕಿರಲಿಲ್ಲ. ಫ್ಲಾೃಟ್‌ನಲ್ಲಿಯೂ ಸಿಸಿಟಿವಿ ಅಳವಡಿಸಿರಲಿಲ್ಲ. ಕುಂದಾಪುರ- ಪಡುಬಿದ್ರಿ, ಉಡುಪಿ ಎಲ್ಲೆಡೆ ಪೊಲೀಸರು ಸಿಸಿಟಿವಿ ಜಾಲಾಡಿ ಕೈಚೆಲ್ಲಿದ್ದರು. ರಾಮಕೃಷ್ಣನಲ್ಲಿ ತಾನು ತಪ್ಪೇ ಮಾಡಿಲ್ಲ ಎಂಬಂತೆ ಅಪಾರ ಆತ್ಮವಿಶ್ವಾಸ ಕಾಣುತ್ತಿತ್ತು. ಆದರೆ ತಾಂತ್ರಿಕ ತನಿಖೆ ವೇಳೆ ರಾಮಕೃಷ್ಣ ಗಾಣಿಗ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದಾಗ ಮಾಡಿದ್ದ ಇಂಟರ್ನೆಟ್ ಕರೆಯ ಸುಳಿವು ಸಿಕ್ಕಿತ್ತು. ಇದು ತನಿಖೆಯ ದಿಕ್ಕನ್ನೇ ಬದಲಿಸಿತು. ಮುಂದುವರಿದಾಗ, ಆತ ದುಬೈನಿಂದಲೂ ಇಂಟರ್ನೆಟ್ ಕರೆ ಮೂಲಕವೇ ಹಂತಕರನ್ನು ಸಂಪರ್ಕಿಸುತ್ತಿದ್ದ ಎಂಬ ಮಾಹಿತಿಯೂ ಲಭಿಸಿದೆ.
ಮೂರನೇ ವ್ಯಕ್ತಿ ಯಾರು?: ರಾಮಕೃಷ್ಣ ಗಾಣಿಗನಿಗೆ ಸುಪಾರಿ ಕಿಲ್ಲರ್‌ಗಳನ್ನು ಸಂಪರ್ಕಿಸಲು ಮತ್ತು ಒಟ್ಟಾರೆ ಸಂಚು ರೂಪಿಸಲು ಮೂರನೇ ವ್ಯಕ್ತಿಯೋರ್ವ ಸಹಕರಿಸಿದ್ದಾನೆ. ಆತನನ್ನೂ ಶೀಘ್ರ ಬಂಧಿಸುತ್ತೇವೆ ಎಂದು ಎಸ್‌ಪಿ ತಿಳಿಸಿದರು.
ಫ್ಲಾೃಟ್‌ಗೆ ಒಬ್ಬಳೇ ಬಾ:ಕೃತ್ಯ ಎಸಗುವ ಉದ್ದೇಶದಿಂದ ಆರೋಪಿ ರಾಮಕೃಷ್ಣ ಗಾಣಿಗ, ‘ಫ್ಲಾೃಟ್ ಬಳಿ ಸ್ನೇಹಿತರು ಬಂದಿದ್ದಾರೆ, ಕೂಡಲೆ ಹೊರಟು ಒಬ್ಬಳೇ ಬಾ’ ಎಂದು ವಿಶಾಲಾರಿಗೆ ಫೋನ್‌ನಲ್ಲಿ ಸೂಚಿಸಿದ್ದಾನೆ. ಸುಪಾರಿ ಕಿಲ್ಲರ್‌ಗಳು ವೈರ್‌ನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ತನಿಖೆ ದಿಕ್ಕು ತಪ್ಪಿಸುವ ಉದ್ದೇಶದಿಂದ ಚಿನ್ನಾಭರಣ ದೋಚಿದ್ದರು.
ನೇಪಾಳ ಗಡಿಯಲ್ಲಿದ್ದ ಆರೋಪಿ: ಮಹಾರಾಷ್ಟ್ರಕ್ಕೆ ತೆರಳಿದ್ದ ತನಿಖಾ ತಂಡಕ್ಕೆ ಸುಪಾರಿ ಕಿಲ್ಲರ್‌ಗಳು ಉತ್ತರ ಪ್ರದೇಶದಲ್ಲಿರುವ ಸುಳಿವು ಸಿಕ್ಕಿತ್ತು. ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಎಸ್‌ಪಿ ದಿನೇಶ್ ಕುಮಾರ್ ಆರೋಪಿಗಳ ಪತ್ತೆಗೆ ಸಹಕಾರ ನೀಡಿದ್ದು, ಅಲ್ಲಿನ ಸ್ಥಳೀಯ ವಿಶೇಷ ಪೊಲೀಸ್ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿ ನೇಪಾಳ ಬಾರ್ಡರ್‌ನಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು ಎಂದು ಎಸ್‌ಪಿ ತಿಳಿಸಿದರು.