ನುಡಿದಂತೆ ನಡೆದ ವಿರೂಪಾಕ್ಷ ಸ್ವಾಮೀಜಿ

VIRUPAX SWAMIJI KARYAKRAMA
Published on

ಹಿರೇಕೆರೂರ: ಸಾಧನೆಯ ಮೆಟ್ಟಿಲು ಏರಿ ನಿಂತು ಅನೇಕ ಕಷ್ಟಕಾರ್ಪಣ್ಯ ಅನುಭವಿಸುತ್ತ, ಚಿಕ್ಕ ಗುಡಿಸಲಿನಂತಿದ್ದ ಮಠವನ್ನು ಇಂದು ಬೃಹದಾಕಾರವಾಗಿ ಬೆಳೆಸಿರುವ ಕೀರ್ತಿ ಕಾಯಕಯೋಗಿ ಲಿಂ. ವಿರೂಪಾಕ್ಷ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದು ಮದ್ವೀರಶೈವ ಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ ಹಂಪಾಳಿ ಹೇಳಿದರು.

ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮದ್ವೀರಶೈವ ಸಮಾಜ, ಅಕ್ಕನ ಬಳಗ ಹಾಗೂ ಯುವ ಘಟಕದಿಂದ ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದ ಲಿಂ. ವಿರೂಪಾಕ್ಷ ಸ್ವಾಮೀಜಿ ಐಕ್ಯರಾದ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಾಮೀಜಿಗಳು ತಮ್ಮ ಆಚಾರ, ನಡೆ, ನುಡಿ, ಕಾಯಕದ ಮೂಲಕ ಈ ಕ್ಷೇತ್ರದಲ್ಲಿ ಬಹು ಹೆಸರುವಾಸಿಯಾಗಿದ್ದರು. ಅವರ ಅಗಲಿಕೆ ಕ್ಷೇತ್ರದ ಭಕ್ತರಿಗೆ ನೋವನ್ನುಂಟು ಮಾಡಿದೆ. ಶ್ರೀಗಳ ಆದರ್ಶ ಮಾರ್ಗಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಸಮಾಜದ ಉಪಾಧ್ಯಕ್ಷ ಆರ್.ಬಿ. ಹಂಜಿ ಮಾತನಾಡಿ, ವಿರೂಪಾಕ್ಷ ಸ್ವಾಮೀಜಿಗಳು ಯಾವತ್ತೂ ಆಸ್ತಿ, ಅಂತಸ್ತು, ಆಡಂಬರ ಬಯಸಿದವರಲ್ಲ, ಸರಳ ಸಜ್ಜನಿಕೆಗೆ ಹೆಸರಾಗಿದ್ದರು. ರಾಜಕೀಯಕ್ಕೆ ಅಂಟಿಕೊಳ್ಳದೆ, ಸದಾಕಾಲ ಕಾಯಕ, ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಠವನ್ನು ಹೆಮ್ಮೆರವಾಗಿ ಬೆಳೆಸಿ, ಸಂಸ್ಕೃತ ಪಾಠಶಾಲೆ, ಯೋಗ ಶಾಲೆಗಳಂತಹ ಅನೇಕ ಕಾರ್ಯಗಳನ್ನು ಆರಂಭಿಸುವ ಮೂಲಕ ಕಾಯಕಯೋಗಿ ಎನಿಸಿಕೊಂಡಿದ್ದಾರೆ ಎಂದರು.

ಅಕ್ಕನ ಬಳಗದ ಅಧ್ಯಕ್ಷೆ ಶಶಿಕಲಾ ಹಾದ್ರಿಹಳ್ಳಿ, ಯುವ ಘಟಕದ ಅಧ್ಯಕ್ಷ ರುದ್ರೇಶ ಬೇತೂರ, ಮದ್ವೀರಶೈವ ಸಮಾಜದ ಕಾರ್ಯದರ್ಶಿ ಇಂದುಧರ ಹಿರೇಮಠ, ಧರ್ಮದರ್ಶಿಗಳಾದ ಸಿದ್ಧಲಿಂಗೇಶ ಶೆಟ್ಟರ, ರುದ್ರಪ್ಪ ಶೆಟ್ಟರ, ಚನ್ನವೀರಪ್ರಭು ಕುಬಸದ, ಕಂಠಾಧರ ಅಂಗಡಿ, ಮಹೇಶ ಅಸುಂಡಿ, ಬಾಬು ಅಣಗೊಂಡರ, ಇಂದುಧರ ಹಳಕಟ್ಟಿ, ರಾಜು ತಿಪ್ಪಶೆಟ್ಟಿ, ಶಿವಯೋಗಿ ಕಾಯಕದ, ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಉಮೇಶ ಹಳಕಟ್ಟಿ, ತಾಲೂಕು ಶಿವಶಿಂಪಿ ಸಮಾಜದ ಅಧ್ಯಕ್ಷ ಶಿವಾನಂದ ನ್ಯಾಮತಿ, ಚಂದ್ರಣ್ಣ ಕಲ್ಯಾಣಿ, ಆಶಾ ಕಲ್ಯಾಣಿ, ಶಶಿಕಲಾ ಕಾಯಕದ, ನೀಲಮ್ಮ ಮಳವಳ್ಳಿ, ವೀರಭದ್ರಪ್ಪ ಚಿಟ್ಟೂರ, ಹರೀಶ ಯತ್ತಿನಹಳ್ಳಿ, ವೀರಣ್ಣ ಚಿಟ್ಟೂರ, ಪ್ರಕಾಶ ಹರಿಹರ, ಚಂದ್ರಣ್ಣ ಮಳವಳ್ಳಿ ಹಾಗೂ ಭಕ್ತರು ಇದ್ದರು.

ಪ್ರಶಾಂತಯ್ಯಶಾಸ್ತ್ರೀ ಹಿರೇಮಠ, ಈರಣ್ಣಯ್ಯ ಮಠದ ಹಾಗೂ ಮೃತ್ಯುಂಜಯ ಕಲ್ಯಾಣಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net