ನ. 11ರಿಂದ ಮೂರು ದಿನ ವರ್ಚ್ಯುವಲ್​ ​ಕೃಷಿ ಮೇಳ; ಏನೆನೆಲ್ಲ ಇರಲಿದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ ನೋಡಿ...

Agricultre
Published on

 ಬೆಂಗಳೂರು: ಕೃಷಿ ಚಟುವಟಿಕೆಗೆ ಉತ್ತೇಜನ, ರೈತರ ಸಮಸ್ಯೆಗೆ ಪರಿಹಾರ ನೀಡುವ ಕೃಷಿ ಮೇಳ ಈ ಬಾರಿ ಸಂಪೂರ್ಣ ಡಿಜಿಟಲ್​ಮಯವಾಗಿರಲಿದೆ. ನ. 11ರಿಂದ 13ರವರೆಗೆ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಮೇಳ ಆಯೋಜನೆಗೊಳುತ್ತಿದ್ದು, ನಿಗದಿತ ಜನರಿಗಷ್ಟೇ ಮೇಳಕ್ಕೆ ಪ್ರವೇಶ ನೀಡಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮೇಳದ ಕುರಿತು ಮಾಹಿತಿ ನೀಡಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್​. ರಾಜೇಂದ್ರಪ್ರಸಾದ್​, ಕರೊನಾ ಸೊಂಕಿನ ಭೀತಿಯ ನಡುವೆಯೇ ಪ್ರಸಕ್ತ ಸಾಲಿನ ಕೃಷಿ ಮೇಳ ಆಯೋಜಿಸಲಾಗುತ್ತಿದೆ. ಈವರೆಗೆ ಕೃಷಿ ಚಟುವಟಿಕೆಗಳ ಬಗೆಗಿನ ಚರ್ಚೆಗಳಿಂದಲೇ ತುಂಬಿರುತ್ತಿದ್ದ ಕೃಷಿ ಮೇಳದಲ್ಲಿ ಈ ಬಾರಿ ಅವ್ಯಾವು ಕಾಣಸಿಗುವುದಿಲ್ಲ. ಸರಳ ಮತ್ತು ವರ್ಚುವಲ್​ ಆಗಿ ಮೇಳ ಆಯೋಜಿಸಲಾಗುತ್ತಿದ್ದು, ಪ್ರತಿದಿನ 200 ರೈತರು ಮತ್ತು ಸಾರ್ವಜನಿಕರ ಪ್ರವೇಶಕ್ಕಷ್ಟೇ ಅವಕಾಶ ನೀಡಲಾಗುತ್ತಿದೆ. ಆದರೆ ಯೂಟ್ಯೂಬ್​, ಫೇಸ್​ಬುಕ್​ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಮೇಳ ವೀಕ್ಷಣೆಗೆ ಅವಕಾಶವಿದೆ. ಆಮೂಲಕ ಭೌತಿಕ ಮತ್ತು ವರ್ಚುವಲ್​ ಆಗಿ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. 

10 ಜಿಲ್ಲೆಗಳ ರೈತರು ಭಾಗಿ:  ಮೇಳದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ 10 ಜಿಲ್ಲೆಯ ರೈತರು ಪಾಲ್ಗೊಳ್ಳಬಹುದಾಗಿದೆ. ಹೀಗೆ ಪಾಲ್ಗೊಳ್ಳುವ ರೈತರಿಗೆ ಒಂದೊಂದು ದಿನ ನಿಗದಿ ಮಾಡಲಾಗಿದೆ. ಅದರಂತೆ ನ. 11ರಂದು ರಾಮನಗರ, ತುಮಕೂರು ಮತ್ತು ಹಾಸನ ಜಿಲ್ಲೆ ರೈತರು, ನ. 12ರಂದು ಬೆಂಗಳೂರು ನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಹಾಗೂ ನ. 13ರಂದು ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ರೈತರು ಮೇಳಕ್ಕೆ ಬರಬಹುದಾಗಿದೆ.

ಖಾಸಗಿ ಪ್ರದರ್ಶಕರಿಗೆ ಅವಕಾಶವಿಲ್ಲ: ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಮೇಳ ನಡೆಯಲಿದೆ. ಅಲ್ಲದೆ, ಈ ಬಾರಿಯ ಮೇಳವನ್ನು 6 ಲಕ್ಷಕ್ಕೂ ಹೆಚ್ಚಿನ ಜನರು ವೀಸುವ ಮತ್ತು ಪಾಲ್ಗೊಳ್ಳುವ ನಿರೀೆ ಹೊಂದಲಾಗಿದೆ. ಕರೊನಾ ಕಾರಣದಿಂದ ಈ ಬಾರಿ ಖಾಸಗಿ ಪ್ರದರ್ಶಕರಿಗೆ ಅವಕಾಶ ನೀಡಿಲ್ಲ. ಕೃಷಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸಂಶೋಧನೆಗಳನ್ನು ಪ್ರದಶಿರ್ಸಲಾಗುವುದು. ಜತೆಗೆ 10 ಜಿಲ್ಲೆಗಳಲ್ಲಿನ ವಿಶ್ವವಿದ್ಯಾಲಯದ 13 ಕೃಷಿ ಸಂಶೋಧನಾ ಕೇಂದ್ರ ಮತ್ತು 7 ಕೃಷಿ ವಿಜ್ಞಾನ ಕೇಂದ್ರಗಳಲ್ಲೂ ವಿವಿಧ ತಳಿ, ಸಂಶೋಧನೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ಅವುಗಳ ಕುರಿತು ಆನ್​ಲೈನ್​ನಲ್ಲಿ ವಿವರಣೆ ಮತ್ತು ನೇರಪ್ರಸಾರವಿರಲಿದೆ ಎಂದು ಹೇಳಿದರು.

ಮೇಳಕ್ಕೆ ಬರಲು ವಯೋಮಿತಿ ನಿಗದಿ: ಕರೊನಾ ಸೋಂಕಿನ ಕಾರಣದಿಂದಾಗಿ 14 ವರ್ಷಕ್ಕಿಂತ ಕೆಳಗಿನ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಬರುವಂತಿಲ್ಲ ಎಂದು ನಿರ್ಬಂಧಿಸಲಾಗುತ್ತಿದೆ. ಮಕ್ಕಳು ಮತ್ತು ವೃದ್ಧರಿಗೆ ಕರೊನಾ ಸೋಂಕು ಹೆಚ್ಚು ಭಾದಿಸಲಿದೆ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ. ಅದರ ಜತೆಗೆ ನಿಯಮಿತವಾಗಿ ಸ್ಯಾನಿಟೈಸ್​ ಮಾಡುವುದು, ಪ್ರತಿಯೊಬ್ಬರೂ ಮಾಸ್ಕ್​ ಧರಿಸುವಂತೆ ಸೂಚಿಸಲಾಗುವುದು ಹಾಗೂ ಥರ್ಮಲ್​ ಸ್ಕ್ರೀನಿಂಗ್​ಗೆ ಒಳಪಡಿಸಲಾಗುತ್ತದೆ ಎಂದರು.

ರೈತರ ಪ್ರಶ್ನೆಗೆ ತಜ್ಞರ ಉತ್ತರ: ವರ್ಚುವಲ್​ ಮೂಲಕ ಮೇಳ ಆಯೋಜಿಸಲಾಗುತ್ತಿದ್ದರೂ, ರೈತರು ಕೃಷಿ ಸಂಬಂಧಿಸಿದಂತೆ ಕೇಳುವ ಪ್ರಶ್ನೆಗೆ ತಜ್ಞರಿಂದ ಉತ್ತರ ಕೊಡಿಸಲಾಗುವುದು. ಪ್ರತಿದಿನ ಒಂದೂವರೆಯಿಂದ 3 ಗಂಟೆಗಳ ಕಾಲ ತಜ್ಞರು ಜೂಮ್​ ಆ್ಯಪ್​ ಮೂಲಕ ರೈತರಿಗೆ ಉತ್ತರಿಸಲಿದ್ದಾರೆ. ತಜ್ಞರ ಉತ್ತರವನ್ನು ಕೃಷಿ ಮೇಳದ ವೆಬ್​ಸೈಟ್​ನಲ್ಲೂ ಪ್ರಕಟಿಸಲಾಗುವುದು ಎಂದು ತಿಳಿಸಿದರು.

3 ಹೊಸ ತಳಿ, 17 ತಂತ್ರಜ್ಞಾನ ಪ್ರಕಟ:  ಕೃಷಿ ಮೇಳದಲ್ಲಿ ಎಲೆ ಚುಕ್ಕೆ ಮತ್ತು ಎಲೆ ತುಕ್ಕು ರೋಗ ನಿರೋಧಕ, ಹೆಚ್ಚು ಇಳುವರಿ ಕೊಡುವ ನೆಲಗಡಲೆ ಜಿಕೆವಿಕೆ 27, ಅಲಸಂದೆ ಕೆಸಿ 8 ಹಾಗೂ ಮೇವಿನ ಅಲಸಂದೆ ಎಂಎ್​ಸಿ 09&03 ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅದರ ಜತೆಗೆ 17 ನೂತನ ಕೃಷಿ ತಾಂತ್ರಿಕತೆಯನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಪ್ರಶಸ್ತಿಗೆ ಅಜಿರ್ ಹೆಚ್ಚಳ:  ಕೃಷಿ ಮೇಳದ ಅಂಗವಾಗಿ ನೀಡಲಾಗುವ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಶಸ್ತಿಗಳಿಗೆ ಅಜಿರ್ಗಳ ಹೆಚ್ಚಳವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಎಲ್ಲ ವಿಭಾಗಗಳಿಗೂ ಶೇ. 100 ಹೆಚ್ಚಿನ ಅಜಿರ್ಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಅರ್ಹ, ಪ್ರಗತಿಪರ ರೈತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯಮಟ್ಟದ 6, ಜಿಲ್ಲಾ ಮಟ್ಟದ 10 ಹಾಗೂ ತಾಲೂಕು ಮಟ್ಟದ 53 ಪ್ರಗತಿಪರ ಯುವ ರೈತ ಮತ್ತು 41 ರೈತ ಮಹಿಳೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆನ್​ಲೈನ್​ನಲ್ಲಿ ಪ್ರಾತ್ಯಕ್ಷಿಕೆ: ಕೃಷಿ ತಂತ್ರಜ್ಞಾನ, ಭೂಮಿಗಳಲ್ಲಿನ ಪ್ರಯೋಗಗಳ ಕುರಿತು ಆನ್​ಲೈನ್​ನಲ್ಲೇ ಮಾಹಿತಿ ನೀಡಲಾಗುವುದು. ರೈತರು ತಮ್ಮ ಮೊಬೈಲ್​ ಮೂಲಕ ಮೇಳದ ಪ್ರತಿ ಚಟುವಟಿಕೆಯನ್ನೂ ವೀಸಲು ಅವಕಾಶವಿದೆ. ಹೀಗಾಗಿ ಹೆಚ್ಚಿನ ರೈತರು ಮೇಳಕ್ಕೆ ಬರುವ ಅವಶ್ಯಕತೆಯಿಲ್ಲ. ಅಲ್ಲದೆ, ಸಾರ್ವಜನಿಕರು ಕೂಡ ಮೇಳಕ್ಕೆ ಬರಬಹುದಾಗಿದ್ದು, ಜನಸಂಖ್ಯೆ ಆಧರಿಸಿ ಅವರನ್ನು ಒಳಗೆ ಬಿಡಲಾಗುವುದು ಎಂದು ಹೇಳಿದರು.

ಕೃಷಿ ಉತ್ಪನ್ನಗಳ ಮಾರ್ಕೆಟಿಂಗ್​:  ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮೇಳದಲ್ಲಿ ವಿವರಿಸಲಾಗುತ್ತದೆ. ಅದಕ್ಕಾಗಿ ಕೃಷಿ ವಿಶ್ವವಿದ್ಯಾಲಯದ ಮೂರು ವಿಭಾಗಗಳು ಕೆಲಸ ಮಾಡಲಿವೆ. ಅಲ್ಲದೆ, ಕೃಷಿ ಮೇಳ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಲು ಆಂಗ್ಲ ಭಾಷೆಯಲ್ಲೂ ಸಂಶೋಧನೆ, ಸಂವಾದಗಳು, ತಜ್ಞರ ಸಲಹೆಗಳ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ಹಾಕಲಾಗುವುದು ಎಂದರು.

 ರಾಜ್ಯಮಟ್ಟದ ಪ್ರಶಸ್ತಿ ವಿಜೇತರು 

  • ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅತ್ಯತ್ತಮ ರೈತ ಪ್ರಶಸ್ತಿ: ಸಿ.ಎಂ.ನವೀನ್​ಕುಮಾರ್​
  • ಸಿ.ಬೈರೇಗೌಡ ಅತ್ಯತ್ತಮ ರೈತ ಪ್ರಶಸ್ತಿ: ಎಂ.ಎನ್​.ರವಿಶಂಕರ್​
  • ಡಾ.ಎಂ.ಎಚ್​.ಮಡಿಗೌಡ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ: ಎಂ.ಆನಂದ್​
  • ಕೆನರಾ ಬ್ಯಾಂಕ್​ ಅತ್ಯುತ್ತಮ ರೈತ ಪ್ರಶಸ್ತಿ: ಎಚ್​.ಕೆ.ಸುರೇಶ್​
  • ಡಾ.ಆರ್​.ದ್ವಾರಕೀನಾಥ್​ ರೈತ ಪ್ರಶಸ್ತಿ: ಕೆ.ಎಂ.ರಾಜಣ್ಣ
  • ಡಾ.ಆರ್​.ದ್ವಾರಕೀನಾಥ್​ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ: ಡಾ.ಕೆ.ಶಿವರಾಮು 
ಆನ್​ಲೈನ್​ ಕುರಿತು ಮಾಹಿತಿ:

ಕೃಷಿ ಮೇಳ ವೆಬ್​ಸೈಟ್​: http://www.krishimela2020uasb.com
ಕೃಷಿ ವಿವಿ ವೆಬ್​ಸೈಟ್​: http://www.uasbangalore.edu.in
ಯೂಟ್ಯೂಬ್​: http://www.youtube.com/channel/UCT3
ಫೇಸ್​ಬುಕ್​: http://www.facebook.com/sis.uasb
ಟ್ವಿಟ್ಟರ್​: http://www.twitter.com/BangaloreUas
ಇನ್ಸ್ಟಾಗ್ರಾಂ: http://www.instagram.com/uasbangalore
ವಾಟ್ಸ್​ಆ್ಯಪ್​: https://wa.me/919482477812
ಜೂಮ್​ ಸಭೆ: https://rawe2020.in/krishimela/zoom/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net