ಸ್ವಾಸ್ಥೃ ಸಮಾಜ ನಿರ್ಮಾಣಕ್ಕೆ ವೀರೇಂದ್ರ ಹೆಗ್ಗಡೆ ಕೊಡುಗೆ ಅಪಾರ

IMG-20240619-WA0248
Published on

ಹನಗೋಡು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜಾರಿಗೊಂಡಿರುವ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಪೂರಕವಾಗಿದೆ ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ದಾ.ರಾ.ಮಹೇಶ್ ತಿಳಿಸಿದರು.


ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆಯುವ ಮಹಿಳಾ ವಿಚಾರಗೋಷ್ಠಿ ಹಾಗೂ ಮಹಿಳೆಯರಿಂದ ಕುಟುಂಬ ನಿರ್ವಹಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಸಂಘವು ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬುವ ಜತೆಗೆ ಶಿಸ್ತು ಮೂಡಿಸುವ ಕೆಲಸ ಮಾಡುತ್ತಿದೆ. ಡಾ.ವೀರೆಂದ್ರ ಹೆಗ್ಗಡೆ ಅವರು ಸ್ವಾಸ್ಥೃ ಸಮಾಜ ನಿರ್ಮಾಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಅಭ್ಯುದಯವನ್ನು ಬಯಸುತ್ತಿದ್ದಾರೆ ಎಂದರು.


ಮಹಿಳೆಯರಿಗೆ ಕಾನೂನಿನ ಅರಿವಿದ್ದರೆ ಮಾತ್ರ ದೌರ್ಜನ್ಯ, ದಬ್ಬಾಳಿಕೆ ತಡೆಯಲು ಸಾಧ್ಯ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಸಮಾನಳಾಗಿ ನಿಲ್ಲಬೇಕಾದರೆ ಶಿಕ್ಷಣ ಅವಶ್ಯ. ಮಹಿಳೆಯರು ಸಬಲೀಕರಣವಾದಷ್ಟು ಶಕ್ತಿ ಹೆಚ್ಚಲಿದೆ. ಹೆಣ್ಣು ಮಕ್ಕಳಿಗೆ ಗರ್ಭಾವಸ್ಥೆಯಿಂದ ಕೊನೆಯವರೆಗೂ ಕಾನೂನಿನ ರಕ್ಷಣೆಯಿದೆ. ಭ್ರೂಣ ಹತ್ಯೆ ನಿಷೇಧ ಕಾಯ್ದೆ, ಶಿಕ್ಷಣ ಪಡೆಯುವ ಹಕ್ಕು, ವರದಕ್ಷಿಣೆ ನಿಷೇಧ ಕಾಯ್ದೆ, ಆಸ್ತಿ ಹಕ್ಕು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ, ಹಣ್ಣಿನ ಮೇಲಾಗುವ ದೌರ್ಜನ್ಯಗಳಿಗೆ ಪರಿಹಾರ ಪಡೆಯಲು ಇರುವ ಕಾನೂನಾತ್ಮಕ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ತಾಲೂಕು ಜ್ಞಾನ ವಿಕಾಸ ಅಧಿಕಾರಿ ರೂಪಾ ಮಾತನಾಡಿ, ಮಹಿಳೆಯರು ಅಡುಗೆ ಮನೆಗಷ್ಟೆ ಸೀಮಿತವಾಗದೆ ಎಲ್ಲ ಕ್ಷೇತ್ರಗಳಲ್ಲಿಯೂ ಗಣನೀಯ ಸೇವೆ ಸಲ್ಲಿಸುತ್ತಿದ್ದಾಳೆ. ಮಹಿಳೆಯರು ಮತ್ತಷ್ಟು ಸಬಲಳಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಗ್ರಾಮಾಭಿವೃದ್ಧಿ ಕಾರ್ಯಕ್ರಮದ ಸೇವಾ ಪ್ರತಿನಿಧಿ ಮಂಜುಳಾ, ಮಹದೇವಮ್ಮ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net