

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮಕ್ಕಳಲ್ಲಿ ಸ್ವಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ತರಬೇತಿ ಪ್ರಮುಖ ಪಾತ್ರ ವಹಿಸಲಿದೆ. ಹೆಣ್ಣು ಸುರಕ್ಷಿತ ವಲಯದಲ್ಲಿ ಬದುಕುತ್ತ ಸಮಾಜದ ಶಕ್ತಿಯಾಗಿ ರೂಪುಗೊಳ್ಳಬೇಕು. ಮಕ್ಕಳಲ್ಲಿ ಶಕ್ತಿ, ಸ್ಫೂರ್ತಿ ತುಂಬುವ ಎಕ್ಸಲೆಂಟ್ ಸಂಸ್ಥೆಯ ಸಂಕಲ್ಪ ಅಭಿನಂದನೀಯ ಎಂದು ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ಪ್ರಾಂಶುಪಾಲ ಎಸ್.ಜಿ.ಹಿರೇಮಠ್ ಹೇಳಿದರು.
ಕಲ್ಲಬೆಟ್ಟುವಿನ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಎಕ್ಸಲೆಂಟ್ ಮೂಡುಬಿದಿರೆ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಲಾದ ವೀರೆ-ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲಳಾದಾಗ ಸಮಾಜ ಸಶಕ್ತವಾಗಿ ರೂಪುಗೊಳ್ಳುತ್ತದೆ. ಹೆಣ್ಣು ಮಕ್ಕಳು ತಮ್ಮ ಹಕ್ಕುಗಳು, ಅವಕಾಶಗಳು ಮತ್ತು ಸಬಲೀಕರಣದ ಬಗ್ಗೆ ಅರಿವು ಹೊಂದಿದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಿಸಬಹುದು. ವಿವಿಧ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ಸಾಬೀತು ಪಡಿಸುತ್ತಾ ಕೌಶಲಗಳನ್ನು ಬಳಕೆ ಮಾಡಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವತ್ತ ಹೆಣ್ಣು ಯೋಚಿಸಬೇಕು ಎಂದರು.
ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕಿ ಪ್ರತಿಭಾ ಕಾರ್ಯಕ್ರಮ ಉದ್ಘಾಟಿಸಿದರು. ಇಂಚರ ಫೌಂಡೇಷನ್ ಸಂಸ್ಥೆಯ ಸಿಬ್ಬಂದಿ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಪ್ರಭಾರ ನಿಲಯ ಪಾಲಕಿ ಆಶಾಲತಾ ಮತ್ತು ವಿದ್ಯಾರ್ಥಿ ಪ್ರತಿನಿಧಿ ಚೈತ್ರಾ ಪಾಟೀಲ್ ಉಪಸ್ಥಿತರಿದ್ದರು. ಉಪನ್ಯಾಸಕ ತೇಜಸ್ವಿ ಭಟ್ ನಿರೂಪಿಸಿದರು.