ಡಿ.14ರಿಂದ 17 : ಮೂಡುಬಿದಿರೆಯಲ್ಲಿ ‘ಆಳ್ವಾಸ್ ವಿರಾಸತ್ 2023’

aaaaaaaaaaaa
Published on



ಮಂಗಳೂರು : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ರಾಷ್ಟ್ರೀಯ ಸಾಂಸ್ಕೃತಿಕ
ಉತ್ಸವ ಡಿ.14ರಿಂದ 17ರವರೆಗೆ ಮೂಡುಬಿದಿರೆಯ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಈ ಬಾರಿಯ ವಿರಾಸತ್ ಅರ್ಪಣೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.14ರಂದು ಸಾಯಂಕಾಲ 5.30ಕ್ಕೆ ರಾಜ್ಯಪಾಲ ಡಾ.ಥಾವರ್‌ಚಂದ್ ಗೆಹ್ಲೋಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. 6.30ಕ್ಕೆ ಆಳ್ವಾಸ್ ವಿರಾಸತ್‌ನ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳ 3 ಸಾವಿರಕ್ಕೂ ಅಧಿಕ ಕಲಾವಿದರು ಮೆರವಣಿಗೆಯಲ್ಲಿ
ಭಾಗವಹಿಸಲಿದ್ದಾರೆ. ಬಳಿಕ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನೆರವೇರಲಿದೆ.
ಡಿ.15ರಂದು ಸಾಯಂಕಾಲ 6ರಿಂದ 8ರವರೆಗೆ ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಲ್ ಅವರಿಂದ ಗಾನ ವೈಭವ ಹಾಗೂ ರಾತ್ರಿ 8ರಿಂದ 9ರವರೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ, ಡಿ. 16ರಂದು ಸಾಯಂಕಾಲ 6ರಿಂದ 8ರವರೆಗೆ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ’ಭಾವ ಲಹರಿ’ ಹಾಗೂ 8ರಿಂದ 9ರವರೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.
ಡಿ.17ರಂದು ಸಾಯಂಕಾಲ 5.15ಕ್ಕೆ ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಕಿಂಡಿ ಹಾಗೂ ವಿಜಯ ಪ್ರಕಾಶ್
ಅವರಿಗೆ ಆಳ್ವಾಸ್ ವಿರಾಸತ್-2023 ಪ್ರಶಸ್ತಿ ಪ್ರದಾನ ಮಾಡಲಾಗುವುದು. 6.30ಕ್ಕೆ ಡಾ. ಮೈಸೂರು ಮಂಜುನಾಥ್, ಡಾ.ಪ್ರವೀಣ್ ಗೋಡ್ಕಿಂಡಿ ಮತ್ತು ವಿಜಯ ಪ್ರಕಾಶ್ ಅವರಿಂದ ’ತಾಳ-ವಾದ್ಯ- ಸಂಗೀತ’ ನಡೆಯಲಿದೆ. ರಾತ್ರಿ 7.30ಕ್ಕೆ ವಿಜಯಪ್ರಕಾಶ್ ಅವರಿಂದ ಸಂಗೀತ ರಸ ಸಂಜೆ ಹಾಗೂ 9.30ರಿಂದ 10.15ರವರೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಅವರು ತಿಳಿಸಿದರು.
*ಸಪ್ತ ಮೇಳಗಳು :
ಆಳ್ವಾಸ್ ವಿರಾಸತ್ ಅಂಗವಾಗಿ ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಅನ್ವೇಷಣಾತ್ಮಕ ಕೃಷಿಕ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ವಿದ್ಯಾಗಿರಿಯಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯ ವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಮೇಳ ಹಾಗೂ ಛಾಯಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟ ವಿಶೇಷ ಆಕರ್ಷಣೆಯಾಗಿದೆ ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದರು. ಉಪನ್ಯಾಸಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

--ಬಾಕ್ಸ್--
ವಿರಾಸತ್ ವಿಶೇಷತೆ
* 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ
* ವಾಹನ ಪಾರ್ಕಿಂಗ್‌ಗೆ ವಿಶಾಲ ವ್ಯವಸ್ಥೆ
* ಕಣ್ಮನ ಸೆಳೆಯುವ ದೀಪಾಲಂಕಾರದ ಸೊಬಗು
*ಕೃಷಿ ಮೇಳದಲ್ಲಿ ಕೃಷಿ ಉಪಕರಣ-ಯಂತ್ರಗಳ ಪ್ರದರ್ಶನ ಮಾರಾಟ.
*ಆಹಾರ ಮೇಳ:ದಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿಯ ವೈವಿಧ್ಯಮಯ ತಿನಿಸುಗಳು
* ಫಲಪುಷ್ಪ ಮೇಳದಲ್ಲಿ 2 ಲಕ್ಷಕ್ಕೂ ಅಧಿಕ ತರಹೇವಾರಿಯ ಫಲ, ಪುಷ್ಪ, ತರಕಾರಿಗಳ ಪ್ರದರ್ಶನ
*ಚಿತ್ರಕಲಾ ಮೇಳದಲ್ಲಿ ದೇಶ-ವಿದೇಶದ ಖ್ಯಾತ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ
* 2ಎಕರೆ ಪ್ರದೇಶದಲ್ಲಿ ಸ್ಕೌಟ್-ಗೈಡ್ಸ್ ಸಾಹಸಮಯ ಚಟುವಟಿಕೆ ಕೇಂದ್ರ
* ಕಾರ್ಯಕ್ರಮಗಳು ಕ್ಲಪ್ತ ಸಮಯಕ್ಕೆ ಆರಂಭ, ಉಚಿತ ಪ್ರವೇಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net