

ಮಂಗಳೂರು: ಮಂಗಳೂರಿನ ದೀರ್ಘಯಾನದ ಬೈಕರ್ ಯುವಕ ಅರುಣ್ ಎಂಬವರು ತಮಿಳುನಾಡಿನಲ್ಲಿ ಮಾಡಿದ ಸಹಾಯ ದೊಡ್ಡ ಸದ್ದು ಮಾಡುತ್ತಿದೆ.
ತಮಿಳುನಾಡಿನ ಪೊಲೀಸ್ ಒಬ್ಬರು ಅರುಣ್ ಅವರಲ್ಲಿ ಅಜ್ಜಿಯೊಬ್ಬರಿಗೆ ಔಷಧ ತಲುಪಿಸುವಂತೆ ಕೇಳಿದ ವಿಡಿಯೋ ಈಗ ವೈರಲ್ ಆಗಿದೆ. ಈಗಾಗಲೇ ತಮ್ಮ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿರುವ ಅರುಣ್ ಮತ್ತಷ್ಟು ಖ್ಯಾತಿ ಪಡೆದಿದ್ದಾರೆ.
ಅರುಣ್ ಆಗಾಗ ಬೈಕ್ ಯಾನ ಮಾಡುತ್ತಿರುತ್ತಾರೆ. ಬೆಂಗಳೂರಿನಿಂದ ತಮಿಳುನಾಡು ಕಡೆಗೆ ಹೋಗುತ್ತಿರುವಾಗ ಇವರನ್ನು ತಮಿಳುನಾಡಿನ ಪೊಲೀಸ್ ಅಡ್ಡ ಹಾಕುತ್ತಾರೆ. ನಿಲ್ಲಿಸಿದ ಅರುಣ್‌ಗೆ ‘ನೀವು ಕರ್ನಾಟಕದವರಾ?’ ಎಂದು ಕೇಳುತ್ತಾರೆ. ಅರುಣ್ ಹೌದೆನ್ನುತ್ತಾರೆ. ‘ಮುಂದೆ ಬಸ್ ಹೋಗಿದೆ, ಅದರಲ್ಲಿರುವ ಅಜ್ಜಿಯೊಬ್ಬರ ಔಷಧ ಬಾಟಲಿ ಬಿದ್ದಿದೆ. ಅವರಿಗೆ ಅದನ್ನು ತಲುಪಿಸಿ’ ಎಂದು ಪೊಲೀಸ್ ಹೇಳಿದಾಗ ಅದರಂತೆ ಬಸ್‌ನ್ನು ಚೇಸ್ ಮಾಡಿ ನಿಲ್ಲಿಸಿ ಬಾಟಲಿ ಹಸ್ತಾಂತರಿಸಿ ‘ಮಿಷನ್ ಅಕಾಂಪ್ಲಿಶ್ಡ್’ ಎನ್ನುತ್ತಾರೆ ಅರುಣ್. ಅವರ ಇಡೀ ಈ ಪ್ರಸಂಗ ಅವರದ್ದೇ ಸ್ಪೋರ್ಟ್ಸ್ ಕ್ಯಾಮರಾದಲ್ಲಿ ಸೆರೆಯಾಗಿರುವುದನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.