

ಬೆಂಗಳೂರು: ಸ್ನೇಹಿತನಿಗೆ ನೆಗೆಯಲು ಹೇಳಿ ಎರಡೂ ಕಡೆಯಿಂದ ಕಾಲಿಗೆ ಒದ್ದು ಬೀಳಿಸಿ ವಿಕೃತಾನಂದ ಅನುಭವಿಸುವ ‘ಸ್ಕಲ್ ಬ್ರೇಕರ್ ಚಾಲೆಂಜ್’ನಿಂದ ಅನೇಕ ಯುವಕರು ಅಕ್ಷರಶಃ ನೆಗೆದು ಬೀಳುತ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳ ಸಾಮಾಜಿಕ ಜಾಲತಾಣದ ಜತೆಗೆ ಟಿಕ್ಟಾಕ್ನಲ್ಲಿ ಕುಖ್ಯಾತವಾಗಿರುವ ಕುಚೇಷ್ಟೆಯೊಂದು ಇದೀಗ ಭಾರತದ ಯುವಕರನ್ನು ಆಕರ್ಷಿಸಲಾರಂಭಿಸಿದೆ.
ಮನರಂಜನೆಗಾಗಿ ಟಿಕ್ಟಾಕ್, ಲೈಕ್ ಮತ್ತಿತರ ಆಪ್ಗಳಲ್ಲಿ ಈ ಹಿಂದೆ ಯುವಕ-ಯುವತಿಯರು ‘ಕಿಕಿ ಚಾಲೆಂಜ್’ ಸ್ವೀಕರಿಸಿ, ಬಲಿಯಾದ ಸಾಕಷ್ಟು ನಿದರ್ಶನಗಳು ಕಣ್ಣಮುಂದಿವೆ. ಇಂಥ ಸಂದರ್ಭದಲ್ಲೇ ‘ಸ್ಕಲ್ ಬ್ರೇಕರ್ ಚಾಲೆಂಜ್’ ವಿಡಿಯೋ ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ನೆಟ್ಟಿಗರ ಮೆಚ್ಚುಗೆಯ ನಿರೀಕ್ಷೆಯಲ್ಲಿ ಪ್ರಾಣಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ.
ಹೆಚ್ಚು ಲೈಕ್ಸ್ ಪಡೆಯುವ ಗೀಳು!: ರೈಲು ಬರುವಾಗ ಹಳಿಯ ಮೇಲೆ ಓಡಿ ವಿಡಿಯೋ ಮಾಡಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದರು. ಅಲ್ಲದೆ, ಚಲಿಸುವ ಕಾರಿನಿಂದ ಇಳಿದು ನೃತ್ಯ ಮಾಡುವ ‘ಕಿಕಿ ಚಾಲೆಂಜ್’ ಗೀಳನ್ನೂ ಅಂಟಿಸಿಕೊಂಡಿದ್ದರು. ಈ ವಿಡಿಯೋಗಳನ್ನು ಚಿತ್ರೀಕರಿಸುವಾಗ ಹಲವರು ಪ್ರಾಣ ಕಳೆದುಕೊಂಡಿದ್ದರು. ‘ಬ್ಲ್ಯೂ ವ್ಹೇಲ್‘ ಮೊಬೈಲ್ ಗೇಮ್ ಚಟಕ್ಕೆ ಬಲಿಯಾದ ಮಕ್ಕಳು ಅದೆಷ್ಟೋ. ಅಂಥದ್ದೇ ಜಾಯಮಾನದ ‘ಸ್ಕಲ್ ಬ್ರೇಕರ್ ಚಾಲೆಂಜ್’ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ. ಟಿಕ್ಟಾಕ್, ಲೈಕ್ ಮತ್ತಿತರ ಆಪ್ಗಳಲ್ಲಿ ಸಕ್ರಿಯರಾಗಿರುವ ಯುವಕರು ಹೆಚ್ಚೆಚ್ಚು ಲೈಕ್ಸ್ ಗಿಟ್ಟಿಸಿಕೊಳ್ಳಲು ಪ್ರಾಣದ ಹಂಗನ್ನೂ ತೊರೆದು ಸ್ನೇಹಿತರ ಜತೆಗೂಡಿ ವಿಭಿನ್ನ ರೀತಿಯ ವಿಡಿಯೋಗಳನ್ನು ಮಾಡುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೆ.
ಏನಿದು ಸ್ಕಲ್ ಬ್ರೇಕರ್ ಚಾಲೆಂಜ್?
ಮೂವರು ಯುವಕರು ಅಥವಾ ಯುವತಿಯರು ಸೇರಿ ಸ್ಕಲ್ ಬ್ರೇಕರ್ ಕುಚೇಷ್ಟೆ ವಿಡಿಯೋ ಮಾಡುತ್ತಿದ್ದಾರೆ. ಮೂವರು ಸಾಲಾಗಿ ಅಕ್ಕಪಕ್ಕದಲ್ಲಿ ನಿಲ್ಲುತ್ತಾರೆ. ಮೂವರ ಪೈಕಿ ಮೊದಲಿಗೆ ಮಧ್ಯದಲ್ಲಿರುವ ವ್ಯಕ್ತಿಯನ್ನು ಬಿಟ್ಟು ಎಡ ಮತ್ತು ಬಲ ಭಾಗದಲ್ಲಿ ನಿಂತ ಮೇಲಕ್ಕೆ ಜಿಗಿಯುತ್ತಾರೆ. ಬಳಿಕ ಮೂವರೂ ಒಟ್ಟಿಗೆ ಮೇಲಕ್ಕೆ ಜಿಗಿಯೋಣ ಎಂದು ಮಧ್ಯದಲ್ಲಿರುವ ವ್ಯಕ್ತಿಗೆ ಹೇಳುತ್ತಾರೆ. ಅದನ್ನು ನಂಬಿ ಆತ ಜಿಗಿಯುತ್ತಿರುವಂತೆ ಎಡ ಮತ್ತು ಬಲ ಭಾಗದಲ್ಲಿರುವ ಇಬ್ಬರೂ ಆ ವ್ಯಕ್ತಿಯ ಕಾಲಿಗೆ ಒದ್ದು ನೆಲಕ್ಕೆ ಕೆಡುವುತ್ತಾರೆ. ಆತ ಬಿದ್ದು ಗಾಯಗೊಂಡು, ನೋವಿನಿಂದ ನರಳುವುದನ್ನು ನಾಲ್ಕನೇ ವ್ಯಕ್ತಿ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಾನೆ. ಅದನ್ನು ವಿವಿಧ ವಾಟ್ಸ್ಆಪ್ ಗ್ರೂಪ್, ಟಿಕ್ಟಾಕ್, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ವಿಕೃತಾನಂದ ಅನುಭವಿಸುತ್ತಾರೆ.
ಬೆನ್ನುಮೂಳೆ, ತಲೆಬುರುಡೆ ಹೋಳು!
ಸ್ಕಲ್ ಬ್ರೇಕರ್ ಚಾಲೆಂಜ್ ಎಂದರೆ ತಲೆಬುರುಡೆ ಒಡೆಯುವುದು ಎಂದು ಅರ್ಥ. ನೆಗೆದ ಎತ್ತರ, ಆತನ ದೇಹ ತೂಕ, ಪಕ್ಕದಲ್ಲಿದ್ದವರು ಒದ್ದ ರಭಸಕ್ಕೆ ಅನುಗುಣವಾಗಿ ಮೇಲಕ್ಕೆ ಜಿಗಿದ ವ್ಯಕ್ತಿಯ ಬೆನ್ನುಮೂಳೆ, ಮೊಣಕೈ ಅಥವಾ ತಲೆಬುರುಡೆ ಸೇರಿ ದೇಹದ ವಿವಿಧ ಭಾಗಕ್ಕೆ ಗಂಭೀರ ಗಾಯಗಳಾಗುವ ಸಾಧ್ಯತೆ ಇರುತ್ತದೆ. ತಲೆ ಮತ್ತು ಕುತ್ತಿಗೆ ಮೇಲೆ ದೇಹಭಾರ ಬಿದ್ದರೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯೂ ಇರುತ್ತದೆ. ನೆಲ ಗಟ್ಟಿಯಾಗಿದ್ದರೆ ತಲೆ ಬುರುಡೆ ಒಡೆಯುವ ಅಥವಾ ಆ ವ್ಯಕ್ತಿ ಕೋಮಾಕ್ಕೆ ಹೋಗಬಹುದು. ಮಿದುಳಲ್ಲಿ ರಕ್ತ ಹೆಪು್ಪಗಟ್ಟಿ ಪಾರ್ಶ್ವವಾಯುವಿಗೂ ತುತ್ತಾಗಿ ಜೀವನಪೂರ್ತಿ ನರಳಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸ್ಕಲ್ ಬ್ರೇಕರ್ ಆಟ ತುಂಬಾ ಅಪಾಯಕಾರಿ. ದೇಹವು ಹಿಂಭಾಗಕ್ಕೆ ಬಿದ್ದಾಗ ತಲೆ, ಬೆನ್ನುಮೂಳೆ ಹಾಗೂ ಕುತ್ತಿಗೆಗೆ ಪೆಟ್ಟಾಗುವ ಅಪಾಯವಿದೆ. ಮಿದುಳಲ್ಲಿ ರಕ್ತ ಹೆಪು್ಪಗಟ್ಟಿ ವ್ಯಕ್ತಿ ಪಾರ್ಶ್ವವಾಯುಗೆ ತುತ್ತಾಗಬಹುದು. ಸಣ್ಣಪುಟ್ಟ ಗಾಯವಾದರೂ ದೀರ್ಘಕಾಲ ಬಾಧಿಸುತ್ತವೆ. ಕತ್ತಿನ ಮೂಳೆ ಮುರಿದರೆ ಆತ ಸ್ಥಳದಲ್ಲೇ ಸಾಯಬಹುದು. | ಡಾ. ಅರುಣ್ ನಾಯಕ್ ಅಪೋಲೋ ಆಸ್ಪತ್ರೆ ನರರೋಗತಜ್ಞ