ಬದಲಾದ ವಾತಾವರಣದಿಂದ ನಗರದಲ್ಲಿ ಹೆಚ್ಚಿದ ವೈರಾಣು ಜ್ವರ

Dengue
Published on

ಬೆಂಗಳೂರು: ಆಗಾಗ್ಗೆ ಸುರಿವ ಮಳೆ, ಸುಡು ಬಿಸಿಲು, ಸಂಜೆಯಾಗುತ್ತಲೇ ಚಳಿ ಹೀಗೆ ವಾತಾವರಣದ ಏರುಪೇರಿನಿಂದಾಗಿ ವೈರಾಣು ಜ್ವರದಿಂದ ಹೈರಾಣಾಗಿರುವ ನಗರದ ಜನತೆಗೆ ಡೆಂಘೆ, ಚಿಕೂನ್ ಗುನ್ಯಾ ಸೇರಿ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದೆ.

ಬದಲಾದ ಹವಾಮಾನದಿಂದಾಗಿ ನೆಗಡಿ, ಕೆಮ್ಮು, ಶೀತ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ಮಕ್ಕಳಿಂದ ವೃದ್ಧರವರೆಗೂ ಬಾಧಿತರಾಗಿದ್ದು, ಕೆಲ ದಿನಗಳಿಂದ ನಗರದ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ 360ಕ್ಕೂ ಅಧಿಕ ಡೆಂಘೆ ಪ್ರಕರಣಗಳು ವರದಿಯಾಗಿವೆ.

ಈವರೆಗೂ ಬೆಂಗಳೂರಿನಲ್ಲಿ 10,381 ಶಂಕಿತ ಡೆಂಘೆ ಪ್ರಕರಣಗಳ ಪೈಕಿ 7,408 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 2,478 ಮಂದಿಯಲ್ಲಿ ಡೆಂಘೆ ದೃಢಪಟ್ಟಿದೆ. ಅದೇ ರೀತಿ 326 ಶಂಕಿತರಲ್ಲಿ 119 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.

ವೈದ್ಯರ ಸಲಹೆ:

ಈಡೀಸ್ ಈಜಿಪ್ಟೆ ಸೊಳ್ಳೆ(ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ) ಕಚ್ಚುವುದರಿಂದ ಡೆಂಘೆ ಕಾಣಿಸಿಕೊಳ್ಳುತ್ತದೆ. ಇದು ಶುದ್ಧವಾದ ಸಂಗ್ರಹಿಸಿಟ್ಟ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಯಾಗಿದೆ. ಹಾಗಾಗಿ ಮನೆಯ ಹೊರಗೆ ಹಾಗೂ ಒಳಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಸಂಗ್ರಹಿಸಿಡುವ ನೀರನ್ನು ಸರಿಯಾದ ರೀತಿಯಲ್ಲಿ ಮುಚ್ಚಿಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರೋಗ ಲಕ್ಷಣಗಳು:

ತೀವ್ರ ಜ್ವರ, ತಲೆನೋವು, ಮೈ-ಕೈ ನೋವು, ಕೀಲುನೋವು, ವಾಂತಿ- ವಾಕರಿಕೆ, ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳು. ಮೈಮೇಲೆ ಕೆಂಪು ದದ್ದು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು.

ವಾತಾವರಣ ಸಮಸ್ಯೆಗೆ ಕಾಡುವ ರೋಗಗಳು:

ವೈರಾಣು ಜ್ವರ, ನೆಗಡಿ, ತೀವ್ರ ಜ್ವರ, ಉಸಿರಾಟದ ಸಮಸ್ಯೆ, ನೆಗಡಿ - ಕೆಮ್ಮು, ಬಳಲಿಕೆ, ಮೈ- ಕೈ ನೋವು, ತಲೆ ನೋವು, ಚಳಿ ಜ್ವರ, ಕೆಲವರಲ್ಲಿ ಶೀತ ಜ್ವರ ಕಂಡು ಬರುತ್ತದೆ.

ಎಚ್ಚರಿಕೆ ಕ್ರಮಗಳು:

* ಶುದ್ಧ ಹಾಗೂ ಕಾಯಿಸಿ ಆರಿಸಿದ ನೀರು ಸೇವನೆ

* ಮನೆಯಲ್ಲಿ ತಯಾರಿಸಿದ ಆಹಾರ ಸೇವನೆಗೆ ಆದ್ಯತೆ

* ಮನೆಯ ಸುತ್ತಮುತ್ತ ನೀರು ನಿಲ್ಲದಂತೆ, ತ್ಯಾಜ್ಯ ಸಂಗ್ರಹಣೆಯಾಗದಂತೆ ಕ್ರಮ

* ಸೊಳ್ಳೆಗಳಿಂದ ಮುಕ್ತರಾಗಲು ಸೊಳ್ಳೆ ಪರದೆ, ಕಿಟಕಿ ಬಾಗಿಲಿಗೆ ಮೆಶ್ ಬಳಕೆ ಸೂಕ್ತ

* ಸೊಳ್ಳೆ ಕಚ್ಚದಂತೆ ಲಭ್ಯವಿರುವ ಲೇಪನಗಳ ಬಳಕೆ

* ಶೀತ ನೆಗಡಿ ಬಾರದಂತೆ ಮಕ್ಕಳು ಹಾಗೂ ವೃದ್ಧರಿಗೆ ಬೆಚ್ಚನೆ ವಾತಾವರಣ ನಿರ್ಮಾಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net