ಕಾಯಕದಿಂದ ಸಮಾಜ ಸಬಲೀಕರಣ

dj hsd shravana
Published on

ಹೊಸದುರ್ಗ: ವಚನಗಳೊಂದಿಗೆ ವ್ಯಕ್ತಿತ್ವವನ್ನು ಶುದ್ಧಿಕರಿಸಿ ಕಾಯಕ ಪ್ರಜ್ಞೆಯ ಮೂಲಕ ಸಮಾಜವನ್ನು ಸಬಲೀಕರಣಗೊಳಿಸುವ ಕೆಲಸವನ್ನು ವಿಶ್ವಗುರು ಬಸವಣ್ಣ ಮಾಡಿದರು ಎಂದು ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಪಟ್ಟಣದ ಜಯದೇವ ಸಭಾಂಗಣದಲ್ಲಿ ಮುರುಘಾಮಠ ಹಾಗೂ ಒಪ್ಪತ್ತಿನಸ್ವಾಮಿ ವಿರಕ್ತಮಠ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಅನುಭಾವ ಶ್ರಾವಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲರ ಬದುಕನ್ನು ಉದ್ಧರಿಸುವ ಮಂತ್ರಗಳಾಗಿರುವ ಶರಣರ ವಚನಗಳಲ್ಲಿ ಲೋಕ ಕಲ್ಯಾಣದ ಅಂಶಗಳಿವೆ ಎಂದರು.

ಆಡುವ ಮಾತು ಮಂತ್ರವಾಗಬೇಕು. ಆದರೆ, ಪ್ರಸ್ತುತವಾಗಿ ಚುಚ್ಚು ಮಾತು, ಅಹಂಕಾರ, ಕೊಲ್ಲುವ ಮಾತುಗಳು ಹೆಚ್ಚಾಗಿವೆ. ಇಂತಹ ವರ್ತನೆಯನ್ನು ದೂರಮಾಡಿ ಪ್ರೀತಿ, ವಿನಯ, ದಯೆ ತುಂಬಿದ ಮಾತುಗಳ ಮೂಲಕ ಸಮಾಜದ ಪ್ರೀತಿ ವಿಶ್ವಾಸಗಳಿಸಬೇಕು ಎಂದು ತಿಳಿಸಿದರು.

ಮುರುಘಾಮಠ ಪರಂಪರೆಯಲ್ಲಿ ಜಯದೇವ ಜಗದ್ಗುರುಗಳ ಸಾಧನೆ ಅಪ್ರತಿಮವಾದುದು. ಸಮಾಜಕ್ಕೆ ಅರಿವು, ಆಶ್ರಯ ಹಾಗೂ ಅನ್ನ ನೀಡುವ ಮೂಲಕ ಬಿದ್ದವರನ್ನು ಎತ್ತುವ ಕೆಲಸ ಮಾಡಿದರು.

ಜಯದೇವ ಜಗದ್ಗುರುಗಳ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕತೆಯನ್ನು ಪಡೆಯಬಹುದಾಗಿದೆ. ಹುಟ್ಟುವಾಗ ಬಡವರಾಗಿ ಹುಟ್ಟಿದರೂ ಕಾಯಕ ಪ್ರಜ್ಞೆಯ ಮೂಲಕ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಬೇಕು ಎಂದರು.

ಕಸಪಾ ತಾಲೂಕಾಧ್ಯಕ್ಷ ಬಿ.ಪಿ.ಓಂಕಾರಪ್ಪ ಮಾತನಾಡಿ, 12ನೇ ಶತಮಾನದ ಶರಣರು ಸಮಾಜಕ್ಕೆ ವಚನಗಳ ಅಮೂಲ್ಯ ಕೊಡುಗೆ ನೀಡಿದ್ದಾರೆ. ಮುಂದಿನ ಪೀಳಿಗೆಗೆ ಹಣ, ಒಡವೆ ಹಾಗೂ ಸಂಪತ್ತನ್ನು ಆಸ್ತಿಯಾಗಿ ನೀಡುವ ಜತೆಗೆ ಜ್ಞಾನವನ್ನು ನೀಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಮನುಷ್ಯನ ಬದುಕಿನಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಹುಟ್ಟಿಹಾಕಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ವಚನಗಳನ್ನು ಒದುವುದರಿಂದ ಫಲ ದೊರೆಯುವುದಿಲ್ಲ, ಅನುಸರಿಸಿದರೆ ಬದುಕು ಬಂಗಾರವಾಗಲಿದೆ ಎಂದರು.

ಮುರುಘೇಂದ್ರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಸಿ.ಮಲ್ಲಿಕಾರ್ಜುನ್, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ತಿಪ್ಪೇಸ್ವಾಮಿ, ಕೋಡಿಹಳ್ಳಿ ತಮ್ಮಣ್ಣ, ಎಂ.ಶಿವಲಿಂಗಪ್ಪ, ಧನುಶಂಕರ್, ಸಿದ್ದರಾಮೇಶ್ ಇದ್ದರು.

ಪ್ರತಿ ಹಳ್ಳಿಗೂ ಶರಣರ ವಚನಗಳನ್ನು ಪರಿಚಯಿಸುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಒಪ್ಪತ್ತಿನ ಸ್ವಾಮಿ ವಿರಕ್ತಮಠದ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯ ನಡೆಸಲಾಗುತ್ತಿದೆ.ಕೆ.ಎಸ್.ಕಲ್ಮಠ್, ಒಪ್ಪತ್ತಿನ ಸ್ವಾಮಿ ಮಠದ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net