'ವಿರಾಜಪೇಟೆ ಮತದಾರರು ಬಿಜೆಪಿ ಪರ'

Virajpet voters are pro-BJP
Published on

ಮಡಿಕೇರಿ:

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅಭೂತಪೂರ್ವ ವಿಜಯ ಸಾಧಿಸಿದ್ದು, ವಿರಾಜಪೇಟೆ ಮತದಾರರು ಬಿಜೆಪಿ ಪರವಾಗಿದ್ದಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ವಿರಾಜಪೇಟೆ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎನ್ನುವ ಕಾರಣಕ್ಕೆ ಕೊಡಗು ಜಿಲ್ಲೆಯಲ್ಲೂ ಕಾಂಗ್ರೆಸ್ ಬಹುಮತ ಪಡೆಯಬಹುದೆನ್ನುವ ಹಗಲುಗನಸು ಕಾಣುತ್ತಿದ್ದ ಆ ಪಕ್ಷದ ಮುಖಂಡರಿಗೆ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಣ್ಣಪುಟ್ಟ ತಪ್ಪುಗಳಿಂದ ಕಾಂಗ್ರೆಸ್ ಗೆಲುವು ಸಾಧಿಸಿರಬಹುದು. ಆದರೆ ಕಾರ್ಯಕರ್ತರ ಶ್ರಮದ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲುವು ದಾಖಲಿಸಿದೆ. ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ವಿರಾಜಪೇಟೆ ಮತದಾರರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಇಲ್ಲದ ಗ್ಯಾರಂಟಿ ಭಾಗ್ಯಗಳಿಗೆ ಮನ್ನಣೆ ನೀಡದೆ ಬಿಜೆಪಿ ಅಭ್ಯರ್ಥಿ ಯದುವೀರ್ ಅವರನ್ನು ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ನೂತನ ಸಂಸದರು ಕೊಡಗಿನ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಿದ್ದಾರೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆ. ಕೇವಲ ೪ ಸಾವಿರ ಮತಗಳ ಅಂತರದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಇಟ್ಟಿದ್ದೇವೆ ಎನ್ನುವ ಭ್ರಮೆಯಲ್ಲಿ ಕಾಂಗೆಸ್ಸಿಗರು ಇದ್ದಾರೆ. ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವ ಮೂಲಕ ವಿರಾಜಪೇಟೆ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತಗೊಳಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net