ಇಲ್ಲಿ ಬೀದಿ ನಾಯಿ, ಜಾನುವಾರು ಹಾವಳಿ

3 church Road
Published on

ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ
ಐತಿಹಾಸಿಕ ಹಿನ್ನಲೆ ಹೊಂದಿರುವ ಸಂತ ಅನ್ನಮ್ಮ ದೇವಾಲಯ ಇರುವ ವಾರ್ಡ್ ಸಂಖ್ಯೆ ೧ ಚರ್ಚ್ ಸ್ಟ್ರೀಟ್‌ನಲ್ಲಿ ಬೀದಿ ನಾಯಿ, ಜಾನುವಾರು ಹಾವಳಿಯಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದ ನಂಬರ್ ೧ ಕನ್ನಡ ದಿನ ಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ವಾರ್ಡ್ ವಾಚ್‌ನಲ್ಲಿ ಸ್ಥಳೀಯರು ತಮ್ಮ ಅಳಲು ತೋಡಿಕೊಂಡರು.

ಪಟ್ಟಣದ ಹೃದಯ ಭಾಗದಲ್ಲಿರುವ ಮೂರ್ನಾಡು ರಸ್ತೆ ಜಂಕ್ಷನ್‌ನಿಂದ ಎಫ್‌ಎಂಸಿ ರಸ್ತೆ, ದೇವಾಂಗ ಬೀದಿ, ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘದ ಬಳಿಯಿಂದ ಪ್ರಕಾಶ್ ಕುಟೀರ, ಶಾಂತ ಚಿತ್ರಮಂದಿರ, ಮಠದ ಗದ್ದೆಯವರೆಗೆ ಅಂದಾಜು ೩ ಕಿಲೋ ಮೀಟರ್ ಸುತ್ತಳತೆ ಹೊಂದಿದೆ. ೮೩೭ ಜನಸಂಖ್ಯೆ ಹೊಂದಿರುವ ಈ ವಾರ್ಡ್‌ನಲ್ಲಿ ೬೫೬ ಮತದಾರರಿದ್ದಾರೆ.

ಶಾಂತ ಚಿತ್ರ ಮಂದಿರದಿಂದ ನಾಯಡ ಶಾಮ್ ಮನೆಯವರೆಗೆ ಶಾಲಾ ಮಕ್ಕಳಿಗೆ ಅನುಕೂವಾಗುವಂತೆ ರಸ್ತೆಯ ೨ ಬದಿಯಲ್ಲಿ ಚರಂಡಿ ಹಾಗೂ ನೆಲಹಾಸು, ಮಠದ ಗದ್ದೆ ಮರು ಡಾಂಬರಿಕರಣ ಕಾಮಗಾರಿ (ತಲಾ ೧೦ ಲಕ್ಷ), ಸೋಮೇಶ್ ಮನೆಯಿಂದ ಶಂಕರ ನಾರಾಯಣ ಮನೆಯವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ (೩ ಲಕ್ಷ), ಶಾಂತ ಚಿತ್ರ ಮಂದಿರದಿಂದ ಕಾವೇರಿ ಆಶ್ರಮದವರೆಗೆ ಮರು ಡಾಂಬರಿಕರಣ (೩.೫೦ ಲಕ್ಷ), ಮುಕ್ಕಾಟಿರ ಕ್ಯಾಟಿ ಮನೆಯಿಂದ ಸಂತ ಅನ್ನಮ್ಮ ನ್ಯಾಯ ಬೆಲೆ ಅಂಗಡಿವರೆಗೆ ಚರಂಡಿ ನಿರ್ಮಾಣ, ನಂಜಪ್ಪ ಮನೆಯಿಂದ ಚಾಲ್ಸ್ ಮನೆಯವರೆಗೆ ಕಾಂಕ್ರೀಟ್ ರಸ್ತೆ, ದೇಶಿಕಾಚಾರ್ ಮನೆಯಿಂದ ಕೆ.ಬಿ. ಪ್ರತಾಪ್ ಮನೆಯವರೆಗೆ ಕಾಂಕ್ರೀಟ್ ಚರಂಡಿ ನಿರ್ಮಾಣ, ಮೊಳ್ಳೆರ ಕಿಶೋರ್ ಮನೆಯಿಂದ ಭೂಪತಿ ಅಂಗಡಿವರಗೆ ಚರಂಡಿ ಕಾವಗಾರಿ (ತಲಾ ೩ ಲಕ್ಷ), ದೇವಾಂಗ ಬೀದಿಯ ನಜೀರ್ ಮನೆ ತೋಡಿನವರೆಗ ಕಾಂಕ್ರೀಟ್ ಚರಂಡಿ (೨ ಲಕ್ಷ), ಕಾವೇರಿ ಆಶ್ರಮದ ಮುಂದೆ ಗಜಾನನ ಮನೆ ಮುಂಭಾಗದಲ್ಲಿ ಕಾಂಕ್ರೀಟ್ ಚರಂಡಿ ಕಾಮಗಾರಿ (೧.೫ ಲಕ್ಷ), ದೊಡ್ಡಟ್ಟಿ ಚೌಕಿಯಿಂದ ಶಾಂತ ಚಿತ್ರ ಮಂದಿರದವರೆಗೆ ಡಾಂಬರಿನಿಂದ ಗುಂಡಿ ಮುಚ್ಚುವ ಕಾಮಗಾರಿ (೫೦ ಸಾವಿರ) ಕಾಮಗಾರಿ ಪೂರ್ಣಗೊಂಡಿದೆ.

**
ದೊಡ್ಡಟ್ಟಿ ಚೌಕಿಯಿಂದ ಶಾಂತ ಚಿತ್ರ ಮಂದಿರದವರೆಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಡಾಂಬರಿಕರಣ ನಡೆಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆಗಾಲ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಮಸೀದಿ ಬಳಿ ಉದ್ದೇಶಿಸಿದ ಕುಡಿಯುವ ನೀರಿನ ಘಟಕವನ್ನು ಶಾಂತ ಚಿತ್ರ ಮಂದಿರದ ಬಳಿ ನಿರ್ಮಾಣ ಮಾಡಲಾಗುವುದು. ಎಫ್‌ಎಂಸಿ ಮುಖ್ಯ ರಸ್ತೆ ಪಿಡಬ್ಲೂಡಿ ವ್ಯಾಪ್ತಿಗೆ ಬರುತ್ತದೆ. ಸರಸ್ವತಿ ಸ್ಟೋರ್ಸ್‌ ಪಕ್ಕದ ಕಾಲು ರಸ್ತೆಯನ್ನು ಸದ್ಯದಲ್ಲಿಯೆ ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು. ಫಿಸಿಹಾ ತಬಸಮ್, ಪಟ್ಟಣ ಪಂಚಾಯಿತಿ ಸದಸ್ಯರು, ೧ನೇ ವಾರ್ಡ್.

**
ಸರಸ್ವತಿ ಸ್ಟೋರ್ಸ್‌ ಪಕ್ಕದ ಕಾಲು ದಾರಿಯನ್ನು ವಿಸ್ತರಣೆ ಮಾಡಿ ಆಟೋಗಳು ಹೋಗುವ ರೀತಿಯಲ್ಲಿ ಮಾಡಿಕೊಟ್ಟರೆ ಉತ್ತಮ. ಅನಾರೋಗ್ಯಕ್ಕೆ ಒಳಗಾದವರನ್ನು ಕರೆದುಕೊಂಡು ಹೋಗಲು ಅನುಕೂಲವಾಗುತ್ತದೆ. ಮನೆ ಪಕ್ಕದಲ್ಲಿ ರಾಜ ಕಾಲವೆ ಹರಿಯುತ್ತಿದ್ದು, ಅದರಲ್ಲಿ ಗಿಡಗಂಟೆ ಬೆಳೆದು ನಿಂತಿವೆ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ಸಮಸ್ಯೆಯಾಗುತ್ತಿದೆ. ಸುಮಾ ಶಾಜಿ, ಗೃಹಿಣಿ.

**
ಮುಖ್ಯ ರಸ್ತೆ ಬದಿಯಲ್ಲಿರುವ ಚರಂಡಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಗಿಡಗಂಟೆಗಳು ಬೆಲೆದು ನಿಂತಿವೆ. ವಾರ್ಡ್ ಸದಸ್ಯರು ಒಂದು ದಿನ ಕೂಡ ಇತ್ತ ತಿರುಗಿ ನೋಡಿಲ್ಲ. ಎರಡು ದಿನಕೊಮ್ಮ ನೀರು ಬರುವುದರಿಂದ ನೀರಿನ ಸಮಸ್ಯೆ ಇಲ್ಲ. ವಿದ್ಯುತ್ ಹಾಗೂ ಕಸದ ಸಮಸ್ಯೆ ಇಲ್ಲ. ನಾವು ಬೇರೆನು ಕೇಳುತ್ತಿಲ್ಲ. ಇರೋದನ್ನ ಸರಿಯಾಗಿ ಮಾಡಿಕೊಡಿ. ಕೆ.ಜಿ. ಅರುಣ್‌ಕುಮಾರ್, ಸ್ಥಳೀಯ ನಿವಾಸಿ.

**
ವಾರ್ಡ್‌ನಲ್ಲಿರುವ ಖಾಸಗಿ ಜಾಗದ ಮಾಲೀಕರು ತಮ್ಮ ಜಾಗ ಖಾಲಿ ಬಿಟ್ಟಿರುವ ಕಾರಣ ಕಾಡು ಬೆಳೆದುಕೊಂಡಿದೆ. ಹಾವು, ಚೇಳುಗಳು ಮನೆ ಸೇರುತ್ತಿದೆ. ಬೀದಿನಾಯಿಗಳು ಹಾಗು ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಶಾಲಾ ವಠಾರ ಆದ ಕಾರಣ ಬೀದಿ ನಾಯಿಗಳನ್ನು ಹತ್ತಿಕ್ಕಬೇಕಿದೆ. ಕಸ ವಿಲೇವಾರಿ ಸಮರ್ಪಕವಾಗಿದೆ. ಚರಂಡಿ, ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಸರಿಯಾಗಿದೆ. ಜೀತೇಂದ್ರ ಕುಮಾರ್, ವರ್ತಕರು.

**
ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿ ಪಡಿಸಬೇಕು. ವಾರ್ಡ್ ಸದಸ್ಯರು ಆಗೊಮ್ಮೆ ಈಗೊಮ್ಮೆ ಬಂದು ಹೋದರೂ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗಿದೆ. ಚರಂಡಿಗಳಲ್ಲಿ ಕಾಡು ಬೆಳೆದುಕೊಂಡಿದೆ. ಮನೆ ಸುತ್ತಮುತ್ತ ಇರುವ ಕಾಡುಗಳನ್ನು ನಾವೇ ಶುಚಿಗೊಳಿಸಿ ಕೊಳ್ಳುತ್ತೇವೆ. ಸದಸ್ಯರು ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಚೇಂದ್ರಿಮಾಡ ಗಣೇಶ್ ನಂಜಪ್ಪ, ಸ್ಥಳೀಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net