

ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ
ವಿರಾಜಪೇಟೆ ತಾಲೂಕು ಕ್ರೀಡಾ ತಾಲೂಕು ಎಂದು ಪ್ರಖ್ಯಾತಿ ಹೊಂದಿದೆ. ಇಲ್ಲಿನ ಕ್ರೀಡಾಪಟಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಪದಕ ಗೆಲ್ಲುವುದರ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಒಬ್ಬ ಕ್ರೀಡಾಪಟು ಪದಕ ಗೆಲ್ಲುತ್ತಿದ್ದಂತೆ ನಮ್ಮ ಜಿಲ್ಲೆ, ನಮ್ಮ ತಾಲೂಕಿ ನವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ವಿರಾಜಪೇಟೆಯಲ್ಲಿ ಕ್ರೀಡೆಗಳಿಗೆ ಬೇಕಾದ ಸವಲತ್ತು ಸರಿಯಾದ ರೀತಿಯಲ್ಲಿ ಒದಗಿಸಿಲ್ಲ.
ಕ್ರೀಡೆ ಗುಣಮಟ್ಟ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ ಕ್ರೀಡೆಗಳನ್ನು ಕೃತಕ ಹುಲ್ಲುಹಾಸಿನ ಮೈದಾನ ಹಾಗೂ ಸಿಂಥೇಟಿಕ್ ಟ್ರಾೃಕ್‌ಗಳಲ್ಲಿ ನಡೆಸುವಂತೆ ಕ್ರೀಡಾ ಇಲಾಖೆ ಆದೇಶ ಹೊರಡಿಸುತ್ತದೆ. ಆದರೆ, ಯಾವ ಕ್ರೀಡೆಗೆ ಯಾವ ರೀತಿಯಲ್ಲಿ ಮೈದಾನ ನೀಡಬೇಕು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಖೇಲೋ ಇಂಡಿಯಾಕ್ಕೆ ಜಿಲ್ಲಾಡಳಿತ ಇತೀಶ್ರೀ ಹಾಡಿದಂತಿದೆ.
ಕೊಡಗು ಜಿಲ್ಲೆ ಕ್ರೀಡಾ ತವರೂರು. ಒಲಂಪಿನ್, ಏಕಲವ್ಯ, ಅರ್ಜುನ ಪ್ರಶಸ್ತಿ ಪಡೆದುಕೊಂಡವರು ಬಹುತೇಕರು ವಿರಾಜಪೇಟೆ ತಾಲೂಕಿ ನವರೆ. ಇಷ್ಟೆಲ್ಲಾ ಪ್ರತಿಭೆಗಳಿದ್ದರು ಕೂಡ ಹಾಕಿ ಆಟವನ್ನು ಮೇಲ್ದರ್ಜೆಗೆ ಏರಿಸಲು ಆಸ್ಟ್ರೋಟರ್ ಮೈದಾನ ಇಲ್ಲ. ೩೦-೪೦ ಕಿಲೋ ಮೀಟರ್ ಕ್ರಮಿಸಿ ಪೊನ್ನಂಪೇಟೆ ಅಥವಾ ಮಡಿಕೇರಿಗೆ ತೆರಳಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ಎಲ್ಲಾ ಕ್ರೀಡೆಗಳನ್ನು ನಡೆಸುವ ಪರಿಸ್ಥಿತಿ ಎದುರಾಗಿದೆ. ಸಿಂಥೇಟಿಕ್ ಟ್ರ್ಯಾಕ್, ಇತರ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಒಳಾಂಗಣ ಕ್ರೀಡಾಂಗಣ ಇಲ್ಲದೆ ಆಟಗಾರರು ಮೈಸೂರು, ಬೆಂಗಳೂರು ಅಂತ ಗುಳೆ ಹೋಗುತ್ತಿದ್ದಾರೆ. ಅಪೂರ್ಣಗೊಂಡಿರುವ ಒಳಾಂಗಣ ಕ್ರೀಡಾಂಗಣ ಬೀಗ ಜಡಿದುಕೊಂಡಿದೆ. ಇದರ ಬಗ್ಗೆ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ.
ಕ್ರೀಡಾಪಟುಗಳಲ್ಲಿ ಪ್ರತಿಭೆ ಇದ್ದರು ಕೂಡ ಕ್ರೀಡೆಯನ್ನು ಹೊರತರಲು ವಿರಾಜಪೇಟೆ ತಾಲೂಕಿನಲ್ಲಿ ಸಾಧ್ಯವಾಗುತ್ತಿಲ್ಲ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡವರು ವಿರಾಜಪೇಟೆ ಸುತ್ತಮುತ್ತ ಇರುವ ಸಣ್ಣಪುಟ್ಟ ಮೈದಾನಗಳಲ್ಲಿ ಆಡಿ ಮೈಸೂರು, ಬೆಂಗಳೂರು, ಮಂಗಳೂರಿನಂತ ದೊಡ್ಡದೊಡ್ಡ ನಗರಗಳಲ್ಲಿ ತರಬೇತಿ ಹೊಂದಿ ರಾಜ್ಯ ದೇಶವನ್ನು ಪ್ರತಿನಿಧಿಸಿದ್ದಾರೆ. ಪರ್ಯಾಸ ಎಂದರೆ ನಮಗೆ ಕ್ರೀಡಾ ಸವಲತ್ತು ಕೊಡಿ ಎಂದು ಕ್ರೀಡಾರ್ಥಿಗಳು ಕ್ರೀಡಾ ಪ್ರೇಮಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುವಂತ ಪರಿಸ್ಥಿತಿ ಒದಗಿ ಬಂದಿದೆ.
ವಿರಾಜಪೇಟೆ ತಾಲೂಕಿನಲ್ಲಿ ಎರಡುವರೆ ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಅಂದಾಜು ೨೫ ಸಾರ ದ್ಯಾರ್ಥಿಗಳಿದ್ದಾರೆ. ೧೪೦ ಹಾಕಿ ತಂಡ ಗಳಿದೆ. ೬೦ ಇತರೆ ಕ್ರೀಡಾ ತಂಡಗಳಿದೆ. ರಾಜ್ಯ, ರಾಷ್ಟ್ಟ್ರ ಅಂತಾರಾಷ್ಟ್ರೀಯ ಮಟ್ಟ, ಒಲಂಪಿಯನ್ ಹಾಕಿ ಆಟಗಾರರಿದ್ದಾರೆ. ಅಥ್ಲೇಟ್‌ಗಳು, ನುರಿತ ಈಜುಗಾರರು ಸೇರಿದಂತೆ ಬಹುಮುಖ ಪ್ರತಿಭೆಯ ಆಟಗಾರರಿದ್ದರು ಕೂಡ ಕ್ರೀಡೆಯನ್ನು ಮೇಲ್ದರ್ಜೆಗೆ ಏರಿಸಲು ಯಾವುದೇ ಸೌಕರ್ಯ ಸವಲತ್ತುಗಳಿಲ್ಲ. ಜೂನಿಯರ್ ಕಾಲೇಜು ಮೈದಾನದಲ್ಲಿ ಬಾಸ್ಕೇಟ್ ಬಾಲ್ ಕೋರ್ಟ್ ಇದ್ದರು ಕೂಡ ಅದು ನಿಷ್ಪ್ರಯೋಜಕ ವಾಗಿದೆ. ಆಟದ ಮೈದಾನ ಆಗಿರುವ ತಾಲೂಕು ಮೈದಾನದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ನೀಡಲಾಗಿದೆ.
**
ಪ್ರಥಮವಾಗಿ ಕ್ರೀಡೆಗೆ ಮೂಲ ಸೌಕರ್ಯವೇ ಅಡಿಪಾಯ. ಅದಿಲ್ಲದಿದ್ದರೆ ನಾವು ಮಾಡುವ ಪ್ರಯತ್ನ ನೀರಿನ ಮೇಲಿನ ಗುಳ್ಳೆಯಂತಾ ಗುತ್ತದೆ. ನಮ್ಮಲ್ಲಿ ಹಲವಾರು ಒಳ್ಳೆಯ ಉತ್ತಮ ತರಬೇತುದಾರರಿದ್ದಾರೆ. ಸೌಲಭ್ಯಗಳ ಕೊರತೆಯಿಂದ ತರಬೇತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅದೆಷ್ಟೋ ಕ್ರೀಡಾ ಪ್ರತಿಭೆಗಳು ಕ್ರೀಡೆಯಿಂದ ವಂಚಿತರಾಗಿದ್ದಾರೆ. ಮಾದಂಡ ತಿಮ್ಮಯ್ಯ ಅಂತಾಷ್ಟ್ರೀಯ ರಗ್ಬಿ ಆಟಗಾರ, ವಿರಾಜಪೇಟೆ.
**
ವಾಲಿಬಾಲ್ ಸೇರಿದಂತೆ ಹಲವು ಕ್ರೀಡೆಗಳಿಗೆ ಸರಿ ಹೊಂದು ಮೈದಾನಗಳಿಲ್ಲ ಹಾಗೂ ಸೌಲಭ್ಯಗಳಿಲ್ಲ. ಜಿಲ್ಲೆಯ ಇಬ್ಬರು ಕ್ರೀಡಾಪಟುಗಳು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಬೆಂಗಳೂರಿನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಆದರೆ ಹೆಸರು ಮಾತ್ರ ಕೊಡಗಿಗೆ ಬಂದಿದೆ. ಸಕಾರ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡದ ಕಾರಣ ನಾವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಜಿಲ್ಲೆಯ ವಾಲಿಬಾಲ್ ಅಸೋಸಿಯೇಷನ್ ನಿಷ್ಕ್ರೀಯಗೊಂಡಿದೆ. ಅಂದಾಯಿ. ರಾಜ್ಯ ವಾಲಿಬಾಲ್ ಆಟಗಾರ, ವಿರಾಜಪೇಟೆ.
**
ತಾಲೂಕಿನಲ್ಲಿ ಕ್ರೀಡಾ ಸೌಲಭ್ಯದ ಕೊರತೆ ಇದೆ. ಬಾಸ್ಕೇಟ್‌ಬಾಲ್ ಕ್ರೀಡೆಗೆ ೩ ಮೈದಾನಗಳಿವೆ. ೨ ಖಾಸಗಿ ಮೈದಾನವಾಗಿದ್ದು, ಅಸೋಸಿ ಯೇಷನ್ ಮೂಲಕ ತೆರಳಿದರೆ ಮಾತ್ರ ಆಟವಾಡಲು ಅವಕಾಶ ನೀಡಲಾಗುತ್ತದೆ. ಜೂನಿಯರ್ ಕಾಲೇಜು ಮ್ಯೆದಾನ ಬಳಸಲು ಯೋಗ್ಯ ವಾಗಿಲ್ಲ. ಸ್ಥಿತಿವಂತರ ಮಕ್ಕಳು ಖಾಸಗಿ ತರಬೇತಿ ಪಡೆದುಕೊಳ್ಳುತ್ತಾರೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಬಡವರ ಪಾಡೇನು. ಸರ್ಕಾರ ಕೂಡಲೆ ಮೈದಾನ ಹಾಗೂ ಸವಲತ್ತುಗಳ ಬಗ್ಗೆ ಗಮನ ಹರಿಸಬೇಕು. ಮನೆಯಪಂಡ ದೇಚಮ್ಮ, ಬಾಸ್ಕೇಟ್ ಬಾಲ್ ಆಟಗಾರ್ತಿ, ವಿರಾಜಪೇಟೆ.
**
ಮಣ್ಣಿನ ಮೈದಾನದ ಆಟಕ್ಕೂ ಕೃತಕ ಹುಲ್ಲುಹಾಸಿನ ಮೈದಾನದಲ್ಲಿ ಆಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಾಥಮಿಕ ಹಂತದಿಂದಲೆ ಟ್ರರ್‌ನಲ್ಲಿ ಆಟ ಪ್ರಾರಂಭಿಸಿದರೆ ಆಟದಲ್ಲಿ ಬದಲಾವಣೆ ಕಾಣಬಹುದು. ತಾಲೂಕಿನಿಂದ ೨೦೦ಕ್ಕೂ ಅಧಿಕ ಮಕ್ಕಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸಿದ್ದಾರೆ. ವಿರಾಜಪೇಟೆ ಹಾಗೂ ಅಮ್ಮತ್ತಿಯಲ್ಲಿ ಟರ್ ಅಳವಡಿಸಿದರೆ ವೈಜ್ಞಾನಿಕ ರೀತಿಯಲ್ಲಿ ತರಬೇತಿ ಪಡೆದುಕೊಳ್ಳಬಹುದು. ಕೂತಂಡ ಪೂಣಚ್ಚ, ಜಂಟಿ ಕಾರ್ಯದರ್ಶಿ, ಹಾಕಿ ಕರ್ನಾಟಕ.
**
ಕೊಡಗನ್ನು ಕ್ರೀಡಾ ಜಿಲ್ಲೆ ಎಂದು ಕರೆದರೆ ಸಾಲದು. ಕ್ರೀಡೆಗೆ ಸಂಬಂಧಿಸಿದಂತೆ ಅಗತ್ಯ ಮೂಲಭೂತ ಸವಲತ್ತು ಒದಗಿಸಬೇಕು. ಇರುವ ೨ ಮೈದಾನದಲ್ಲಿ ಎಲ್ಲಾ ಕ್ರೀಡೆಗಳಿಗೆ ಅನುಕೂಲವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ಉನ್ನತ್ತಿರಣಗೊಳಿಸಿ ಮುಂಬರುವ ಯುವ ಪಿಳಿಗೆಗೆ ಪ್ರಾಥಮಿಕ ಹಂತದಿಂದಲೆ ಉನ್ನತ ಮಟ್ಟದ ತರಬೇತಿ ಸಿಗುವ ರೀತಿಯಲ್ಲಿ ಕ್ರೀಡಾ ಇಲಾಖೆ ಕ್ರಮ ಕೈಗೊಳ್ಳಬೇಕು. ಸಿ.ಕೆ. ಪೃಥ್ವಿನಾಥ್, ುಟ್‌ಬಾಲ್ ಆಟಗಾರ, ವಿರಾಜಪೇಟೆ.
**
ಕ್ರಿಕೆಟ್ ಆಡಲು ವಿರಾಜಪೇಟೆ ಸುತ್ತಮುತ್ತ ಮೈದಾನಗಳಿಲ್ಲ ಸರ್ಕಾರಿ ಹಾಗೂ ಇತರೆ ಕಾರ್ಯಕ್ರಮಗಳಿದ್ದರೆ ಜೂನಿಯರ್ ಕಾಲೇಜು ಮೈದಾನ ಸಿಗಲ್ಲ. ಖಾಸಗಿ ಮೈದಾನಗಳಿಗೆ ಒಂದು ದಿನಕ್ಕೆ ೫ ಸಾವಿರ ರೂ. ನೀಡಬೇಕು. ಮೈದಾನ ಇಲ್ಲದ ಕಾರಣ ಪ್ರತಿಭೆ ಇದ್ದರು ಬಡವ ಕ್ರೀಡಾಪಟುಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಒಳಾಂಗಣ ಕ್ರೀಡಾಂಗಣ ಹೆಸರಿಗೆ ಮಾತ್ರ ಇದೆ. ನಿತಿನ್ ಲೇಪು, ಕ್ರಿಕೆಟ್ ಆಟಗಾರ, ತೆಲುಗರ ಬೀದಿ.
ಕ್ರೀಡಾ ಸವಲತ್ತುಗಳ ಕೊರತೆ ಬಗ್ಗೆ ಗಮನಕ್ಕೆ ಬಂದಿದೆ. ಸರ್ಕಾರಿ ಸೌಮ್ಯದ ಜೂನಿಯರ್ ಕಾಲೇಜು ಮೈದಾನದ ಉನ್ನತ್ತಿರಣ ಹಾಗೂ ಯಾವ ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ವರ್ತಕರ ಸಂಘ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಭೆ ಕರೆದು ತಾಲೂಕು ಮೈದಾನದಲ್ಲಿ ವಾಹನ ನಿಲುಗಡೆ ವಿಚಾರದಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು. ಅರ್ಚನಾ ಭಟ್, ವಿರಾಜಪೇಟೆ ತಹಸೀಲ್ದಾರ್.
**
ಸರ್ಕಾರ ಹಾಗೂ ಕ್ರೀಡಾ ಇಲಾಖೆ ಮನಸ್ಸು ಮಾಡಿದರೆ ಯಾರು ಬೇಕಾದರು ತರಬೇತಿ ಪಡೆದುಕೊಳ್ಳುವ ರೀತಿಯಲ್ಲಿ ವಿರಾಜಪೇಟೆ ಸುತ್ತ ಮುತ್ತ ಮೈದಾನ ನಿರ್ಮಾಣ ಮಾಡಬಹುದು. ಮೈದಾನ ಇದ್ದರೆ ಉತ್ತಮ ತರಬೇತುದಾರರು ಬಂದು ತರಬೇತಿ ನೀಡುತ್ತಾರೆ. ಅಥ್ಲೆಟಿಕ್ಸ್‌ನಲ್ಲಿ ಒಳ್ಳೆಯ ಭವಿಷ್ಯ ಇದೆ. ಬೊಳ್ಳಂಡ ಅಯ್ಯಪ್ಪ, ಅಂತಾರಾಷ್ಟ್ರೀಯ ಕ್ರೀಡಾ ತರಬೇತುದಾರ, ವಿರಾಜಪೇಟೆ.