ವಿರಾಜಪೇಟೆ ರಸ್ತೆ ವಿಸ್ತರಣೆಗೆ ಅಡೆತಡೆ

Samvada
Published on

ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ


ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಸೂಕ್ತ ಪರಿಹಾರ ನೀಡಬೇಕು. ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರು ಬ್ರಿಟಿಷ್ ಆಳ್ವಿಕೆ ಕಾಲದ ಅಧಿಸೂಚನೆ ಪಾಲನೆ ಮಾಡುವುದಾದರೆ ನಮ್ಮ ಪ್ರಜಾಪ್ರಭುತ್ವಕ್ಕೆ ಏನು ಬೆಲೆ. ಅಧಿಕಾರಿ ವರ್ಗ ದವರು ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡದರಿಂದ ನಮ್ಮ ಮನೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ… ಇದು ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ವಿರಾಜಪೇಟೆ ರಸ್ತೆ ವಿಸ್ತರಣೆಗೆ ಸಂಬಂಧಿಸಿದ್ದಂತೆ ಆಯೋಜಿಸಿದ್ದ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯ.

ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಕಷ್ಟ ಸಾಧ್ಯ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಸರ್ಕಾರ ಸೂಕ್ತ ಪರಿಹಾರ ನೀಡಿದರೆ ರಸ್ತೆ ವಿಸ್ತರಣೆಗೆ ಯಾವ ಅಭ್ಯಂತರ ಇಲ್ಲ. ಎಲ್ಲಿಗೆ ಹೋಗಬೇಕಾದರು ಪಟ್ಟಣದ ಮದ್ಯಭಾಗದಿಂದಲೆ ಹಾದು ಹೋಗಬೇಕಿದೆ. ಪಟ್ಟಣದ ಕೆಲವು ಕಡೆಗಳಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಿದರೆ ಕೊಂಚ ಮಟ್ಟಿಗೆ ಸಮಸ್ಯೆ ಇತ್ಯರ್ಥವಾಗುತ್ತದೆ. ರಸ್ತೆ ವಿಸ್ತರಣೆ ಅನಿಯಾರ್ಯ ಎಂದು ಸಂವಾದದಲ್ಲಿ ಪಾಲ್ಗೊಂಡಿದ್ದವರು ಮುಕ್ತ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರಾಗಿದ್ದ ದೊಡ್ಡ ವೀರರಾಜೇಂದ್ರ ಅವರ ಹೆಸರಿನಲ್ಲೇ ವೀರರಾಜೇಂದ್ರಪೇಟೆ ಎಂದು ಹೆಸರಿಡ ಲಾಗಿದೆ. ಅದು ಕಾಲಕ್ರಮೇಣ ವೀರಾಜಪೇಟೆ ಎಂದಾಗಿದೆ. ರಾಜ್ಯ ಸರ್ಕಾರದ ಸುತ್ತೋಲೆಯಂತೆ ರಾಜ್ಯ ಹೆದ್ದಾರಿ ಪಟ್ಟಣದ ವ್ಯಾಪ್ತಿಯಲ್ಲಿ ಹಾದುಹೋಗುವ ರಸ್ತೆಗಳು ಇಕ್ಕೆಲಗಳಲ್ಲಿ ಅಂದಾಜ ೨೦ ಅಡಿ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಟ್ಟಡ ನಿರ್ಮಿಸಬೇಕಾದರೆ ರಸ್ತೆಯ ಮಧ್ಯ ಭಾಗದಿಂದ ೪೦ ಮೀಟರ್, ಜಿಲ್ಲಾ ರಸ್ತೆಯಲ್ಲಿ ೨೫ ಮೀಟರ್ ಬಿಡಬೇಕಿದೆ.

**
ಪಟ್ಟಣದಲ್ಲಿ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕಟ್ಟಡ ನಿರ್ಮಾಣ ಮಾಡುವಾಗ ಪಾರ್ಕಿಂಗ್‌ಗೆ ಪರವಾನಿಗೆ ತೆಗೆದುಕೊಂಡ ನಂತರ ವಾಣಿಜ್ಯ ಬಳಕೆಗೆ ಬಳಸಲಾಗುತ್ತಿದೆ. ಅಂಗಡಿ ಮಾಲೀಕರು ಬೆಳಗ್ಗಿನಿಂದ ಸಂಜೆಯವರೆಗೆ ತಮ್ಮ ಅಂಗಡಿ ಮುಂದೆ ವಾಹನ ನಿಲ್ಲಿಸುತ್ತಾರೆ. ಗ್ರಾಮೀಣ ಪ್ರದೇಶದಿಂದ ಬರುವವರು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಾರೆ. ಸರ್ಕಾರಿ ಕಚೇರಿ, ನ್ಯಾಯಾಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ವಿ.ಟಿ. ಮದನ್, ಸಾಮಾಜಿಕ ಕಾರ್ಯಕರ್ತ, ಕಲ್ಲುಬಾಣೆ.

**
ಅಮ್ಮತ್ತಿ ಭಾಗದಿಂದ ರಸ್ತೆ ವಿಸ್ತರಣೆಗೆ ಚಾಲನೆ ನೀಡಲಾಗದೆ. ವಿರಾಜಪೇಟೆ ಪಟ್ಟಣದ ವಿಚಾರದಲ್ಲಿ ಕೆಲವು ಸಂಘ೦ ಸಂಸ್ಥೆಗಳು ನ್ಯಾಯಾಲಯಕ್ಕೆ ಹೋದ ಕಾರಣ ನ್ಯಾಯಾಲಯದ ನಿರ್ದೇಶನದಂತೆ ರಸ್ತೆ ವಿಸ್ತರಣೆ ಮಾಡಲಾಗುವುದು. ಸಿದ್ದೇಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ವಿರಾಜಪೇಟೆ.

**
ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಸರ್ವೇ ಆಧರಿಸಿ ರಸ್ತೆ ಮಧ್ಯ ಭಾಗದಿಂದ ೩೩/೩೩ ಅಡಿಗಳಷ್ಟು ಅಗಲೀಕರಣಕ್ಕೆ ಸರ್ಕಾರ ಮುಂದಾಗಿದೆ. ಆದರೆ, ಎಲ್ಲಯು ಅದಕ್ಕೆ ಪೂರಕವಾದ ದಾಖಲೆಗಳಿಲ್ಲ. ರಾಜರ ಕಾಲದಿಂದಲೂ ವಾಸವಾಗಿದ್ದೇವೆ. ಸ್ಥಳೀಯ ಅಧಿಕಾರಿಗಳ ತಪ್ಪು ಮಾಹಿತಿಯಿಂದ ನಮಗೆ ಅಡಚಣೆಯಾಗಿದೆ. ಸರ್ಕಾರ ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟರೆ ನಮ್ಮ ಅಭ್ಯಂತರವಿಲ್ಲ. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡುವುದಾದರೆ ನಾವು ಸಿದ್ಧರಿದ್ದೇವೆ. ಟಿ.ಪಿ. ಕೃಷ್ಣ, ವಕೀಲರು, ವಿರಾಜಪೇಟೆ.

**
ಸಂಚಾರ ದಟ್ಟಣೆಯಿಂದ ಸಕಾಲಕ್ಕೆ ಬಸ್ಸುಗಳು ತಲುಪಲು ಸಾಧ್ಯವಾಗುತ್ತಿಲ್ಲ. ಖಾಸಗಿ ಬಸ್ ನಿಲ್ದಾಣದಲ್ಲಿ ೧೦ ರಿಂದ ೧೫ ಬಸ್ಸು ಒಂದೇ ಬಾರಿ ಬರುತ್ತದೆ. ಇತರ ಖಾಸಗಿ ವಾಹನಗಳಿಗೆ ನಿಲುಗಡೆ ಸಮಸ್ಯೆ ಇದೆ. ಸರಿಯಾದ ನಿಲುಗಡೆ ವ್ಯವಸ್ಥೆ ಇಲ್ಲದ ಕಾರಣ ಬಸ್ಸ್ ಕಾರ್ಮಿಕರ ನಡುವೆ ಜಗಳ ಉಂಟಾಗುತ್ತಿದೆ. ಮುಖ್ಯ ರಸ್ತೆ ಅಗಲೀಕರಣವಾದರೆ ಸಮಸ್ಯೆ ಇತ್ಯರ್ಥಗೊಳ್ಳಲಿದೆ. ಕುಂಬೇಯಂಡ ಸುರೇಶ್ ದೇವಯ್ಯ, ಅಧ್ಯಕ್ಷರು, ಖಾಸಗಿ ಬಸ್ ಕಾರ್ಮಿಕರ ಸಂಘ, ವಿರಾಜಪೇಟೆ.

**
ಪುರಸಭೆ ಮತ್ತು ಲೋಕೋಪಯೋಗಿ ಅಧಿಕಾರಿಗಳೀಗೆ ಇಚ್ಛಾಸಕ್ತಿ ಕೊರತೆ ಇದೆ. ಕಟ್ಟಡ ನಿರ್ಮಾಣ ಮಾಡುವಾಗ ಮುಖ್ಯ ರಸ್ತೆಯಿಂದ ಎಷ್ಟು ಅಡಿ ಬಿಟ್ಟು ಕಟ್ಟಬೇಕೆಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದ ಕಾರಣ ಇಂತಹ ಪರಿಸ್ಥಿತಿ ಅನುಭವಿ ಸುತ್ತಿದ್ದೇವೆ. ಉಳ್ಳವರಿಗೊಂದು ನ್ಯಾಯ. ಇಲ್ಲದವರಿಗೊಂದು ನ್ಯಾಯ. ರಸ್ತೆ ಅಗಲೀಕರಣ ಮಾಡಿದರೆ ಮಾತ್ರ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಿನೋಬ್, ವರ್ತಕರು, ವಿರಾಜಪೇಟೆ.

**
ಹತ್ತು ವರ್ಷದಿಂದ ರಸ್ತೆ ಅಗಲೀಕರಣಕ್ಕಾಗಿ ಹೋರಾಟ ನಡೆಸುತ್ತಿದ್ದು, ಇದುವರೆಗೂ ಕಾರ್ಯಗತವಾಗಿಲ್ಲ. ಮಟ್ಟನೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರು, ಪ್ರವಾಸಿಗರು ಹೆಚ್ಚಾಗಿ ಪಟ್ಟಣಕ್ಕೆ ಬರುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಅಪಘಾತ ಸಂಭವಿಸುತ್ತಿದೆ. ಹೊಸ ಆಟೋಗಳು ಬರುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಎನ್.ಎನ್. ಶಿವು, ಅಧ್ಯಕ್ಷರು, ಜೈ ಭಾರತ್ ಆಟೋ ಚಾಲಕರ ಸಂಘ, ವಿರಾಜಪೇಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net