ವಿರಾಜಪೇಟೆಗೆ ಲತೀಫ್, ಮಡಿಕೇರಿಗೆ ಲೋಕೇಶ್ ಅರ್ಜಿ

Congress-Logo-Png-Transpatent-1
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ


ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಪಿ.ಎಂ. ಅಬ್ದುಲ್ ಲತೀಫ್ ಹಾಗೂ ಮಡಿಕೇರಿ ಕ್ಷೇತ್ರಕ್ಕೆ ಕೆ.ಎಂ. ಲೋಕೇಶ್ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ಅರ್ಜಿ ಸಲ್ಲಿಸಿದ್ದಾರೆ. ಏತನ್ಮಧ್ಯೆ, ನಾನು ಕಾಂಗ್ರೆಸ್ಸಿನಿಂದ ಸ್ಪರ್ಧಿಸುವು ದಿಲ್ಲ ಎಂದು ಕದ್ದಣಿಯಂಡ ಹರೀಶ್ ಬೋಪಣ್ಣ ಸ್ಪಷ್ಟೀಕರಣ ನೀಡಿದ್ದಾರೆ.

ವಿರಾಜಪೇಟೆ ಕ್ಷೇತ್ರಕ್ಕೆ ೩ ಹಾಗೂ ಮಡಿಕೇರಿ ಕ್ಷೇತ್ರಕ್ಕೆ ೭ ಆಕಾಂಕ್ಷಿಗಳು ಟಿಕೆಟ್ ಕೋರಿದ್ದಾರೆ. ಶುಕ್ರವಾರ ಮಧ್ಯಾಹ್ನ ೨.೩೦ ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಆಕಾಂಕ್ಷಿಗಳ ಸಭೆ ಕರೆಯಲಾಗಿದೆ. ಪಕ್ಷದ ವರಿಷ್ಠರು ಆಕಾಂಕ್ಷಿಗಳೊಂದಿಗೆ ನೇರವಾಗಿ ಚುನಾವಣಾ ಸ್ಪರ್ಧೆ ಬಗ್ಗೆ ಚರ್ಚಿಸಲಿದ್ದಾರೆ.

ಕೆಪಿಸಿಸಿಗೆ ಅರ್ಜಿ ಸಲ್ಲಿಸಲು ನಿಗದಿಯಾಗಿದ್ದ ಅವಧಿ ಇದೀಗ ಪೂರ್ಣಗೊಂಡಿದೆ. ಮಡಿಕೇರಿ ಕ್ಷೇತ್ರಕ್ಕೆ ಬಿ.ಎ. ಜೀವಿಜಯ, ಎಚ್.ಎಸ್. ಚಂದ್ರಮೌಳಿ, ಕೆ.ಪಿ. ಚಂದ್ರಕಲಾ, ಡಾ.ಮಂಥರ್ ಗೌಡ, ಹರಪಳ್ಳಿ ರವೀಂದ್ರ, ಕೆ.ಕೆ. ಮಂಜುನಾಥ್‌ಕುಮಾರ್, ಕೆ.ಎಂ. ಲೋಕೇಶ್ಆ ಕಾಂಕ್ಷಿಗಳಾಗಿದ್ದಾರೆ. ವಿರಾಜಪೇಟೆ ಕ್ಷೇತ್ರಕ್ಕೆ ಶಾಂತೆಯಂಡ ವೀಣಾ ಅಚ್ಚಯ್ಯ, ಎ.ಎಸ್. ಪೊನ್ನಣ್ಣ, ಪಿ.ಎಂ. ಅಬ್ದುಲ್ ಲತೀಫ್ಆಕಾಂಕ್ಷಿಗಳಾಗಿದ್ದಾರೆ.

ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಅಬ್ದುಲ್ ಲತೀಫ್ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ಸುಂಟಿಕೊಪ್ಪ ನಿವಾಸಿಯಾಗಿದ್ದಾರೆ. ಆದರೆ, ಇವರು ವಿರಾಜಪೇಟೆ ಟಿಕೆಟ್ ಆಕಾಂಕ್ಷಿಯಾಗಿರುವುದು ಕುತೂಹಲ ಮೂಡಿಸಿದೆ. ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ೩೬ ಸಾವಿರ ಮುಸ್ಲಿಂ ಮತಗಳಿರುವುದು ವಿಶೇಷ. ವೀಣಾ ಅಚ್ಚಯ್ಯ ಕೂಡ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ಮುಕ್ಕೋಡ್ಲು ನಿವಾಸಿಯಾಗಿದ್ದು, ವಿರಾಜಪೇಟೆ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಸೋಮವಾರಪೇಟೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾಗಿರುವ ಕೆ.ಎಂ. ಲೋಕೇಶ್ ಅಂತಿಮ ಕ್ಷಣದಲ್ಲಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಕೊಡಗು ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ವಿಧಾನ ಪರಿಷತ್ ೧ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಆ ಕಾಂಕ್ಷಿಯಾಗಿ ದ್ದರು. ಕೊಡಗು ಜಿಲ್ಲಾ ಕಾಂಗ್ರೆಸ್ ಕೂಡ ಲೋಕೇಶ್ ಹೆಸರು ಮಾತ್ರ ಶಿಫಾರಸ್ಸು ಮಾಡಿತ್ತು. ಆರ್ಥಿಕ ಶಕ್ತಿ ಆಧಾರದಲ್ಲಿ ವರಿಷ್ಠರು ಡಾ.ಮಂಥರ್ ಗೌಡ ಅವರಿಗೆ ಟಿಕೆಟ್ ನೀಡಿತ್ತು.

ಶುಕ್ರವಾರ (ನ.೨೫) ನಿಗದಿಯಾಗಿರುವ ಆಕಾಂಕ್ಷಿಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಪಾಲ್ಗೊಳ್ಳಲಿದ್ದಾರೆ.

ಕಾಂಗ್ರೆಸ್ಸಿಂದ ಸ್ಪರ್ಧಿಸಲ್ಲ… !

ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುವುದಿಲ್ಲ ಎಂದು ಕೊಡಗಿನ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಮ್ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಸ್ಪಷ್ಟೀಕರಣ ನೀಡಿದ್ದಾರೆ. ನಾನು ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿಲ್ಲ ಎಂದು ವಿಡಿಯೋ ಮೂಲಕ ಮಂಗಳವಾರ ಸ್ಪಷ್ಟ ಪಡಿಸಿದ್ದಾರೆ.

ನಾನು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೇನೆಂದು ಮಾಧ್ಯಮಗಳಿಗೆ ಸುಳ್ಳು ಕಾಂಗ್ರೆಸ್ ಕಾರ್ಯಾಧ್ಯಕ್ಷರು, ಎಲ್ಲಾ ಘಟಕದ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯಕರ್ತರಿಗೆ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿಲ್ಲ. ಇಷ್ಟು ವರ್ಷ ಸಹಕಾರ ಕೊಟ್ಟಿದ್ದಕ್ಕೆ ಧನ್ಯವಾದಗಳೆಂದು ೫೬ ಸೆಕೆಂಡ್‌ನ ವಿಡಿಯೋದಲ್ಲಿ ಹೇಳಿದ್ದಾರೆ. ಹರೀಶ್ ಬೋಪಣ್ಣ ಜೆಡಿಎಸ್ ಸೇರ್ಪಡೆಗೊಳ್ಳುವುದರ ಮೂಲಕ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ರಾಜಕೀಯವಾಗಿ ಇನ್ನೂ ಯಾವ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆಂದು ಹರೀಶ್ ಬೋಪಣ್ಣ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಜೆಡಿಎಸ್ ಮುಖಂಡರಾದ ನಾಪಂಡ ಮುತ್ತಪ್ಪ, ಮೇರಿಯಂಡ ಸಂಕೇತ್ ಪೂವಯ್ಯ, ಮಾಂಗೇರ ಪದ್ಮಿನಿ ಪೊನ್ನಪ್ಪ, ಕಾಂಗ್ರೆಸ್ ಮುಖಂಡ ಮುಕ್ಕಾಟೀರ ಶಿವು ಮಾದಪ್ಪ ಸೇರಿದ್ದಂತೆ ಕೊಡಗಿನ ಹಲವು ಮುಖಂಡರು ಒಂದಾಗಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುವುದರ ಮೂಲಕ ಕುತೂಹಲ ಮೂಡಿಸಿದ್ದಾರೆ.

**
ಕೆಪಿಸಿಸಿಗೆ ಟಿಕೆಟ್ ಕೋರಿ ಮಡಿಕೇರಿ ಕ್ಷೇತ್ರಕ್ಕೆ ೭ ಹಾಗೂ ವಿರಾಜಪೇಟೆ ಕ್ಷೇತ್ರಕ್ಕೆ ೩ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ೨.೩೦ ಗಂಟೆಗೆ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ವರಿಷ್ಠ ಮುಖಂಡರು ಆಕಾಂಕ್ಷಿಗಳ ಸಭೆ ನಡೆಸಲಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಅಭ್ಯರ್ಥಿ ಘೋಷಣೆಯಾಗುವ ನಿರೀಕ್ಷೆ ಇದೆ. ತೀತೀರ ಧರ್ಮಜ ಉತ್ತಪ್ಪ, ಅಧ್ಯಕ್ಷರು, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net