

ವಿರಾಜಪೇಟೆ : ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸೋಮವಾರ ನಡೆದು, ಅಧ್ಯಕ್ಷರಾಗಿ ದೇಚಮ್ಮ ಕಾಳಪ್ಪ ಮತ್ತು ಉಪಾಧ್ಯಕ್ಷರಾಗಿ ಫೌಸಿಯಾ ತಬಸುಮ್ ಆಯ್ಕೆಗೊಂಡರು.
ವಿರಾಜಪೇಟೆ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಮತ್ತು ತಹಸೀಲ್ದಾರ್ ರಾಮಚಂದ್ರ ಮತ್ತು ಸಹಾಯಕ ಚುನಾವಣಾಧಿಕಾರಿಗಳಾದ ಚಂದ್ರಕುಮಾರ್ ಅವರ ಉಪಸ್ಥಿತಿಯಲ್ಲಿ ಪುರಭವನ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಬೊಪ್ಪಂಡ ಸುನಿತಾ ಜೂನಾ, ಉಪಾಧ್ಯಕ್ಷ ಸ್ಥಾನಕ್ಕೆ ಬೋವಿರಿಯಂಡ ಆಶಾ ಸುಬ್ಬಯ್ಯ ಅವರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನಿಂದ ದೇಚಮ್ಮ ಕಾಳಪ್ಪ ಹಾಗೂ ಫೌಸಿಯಾ ತಬಸುಮ್ ನಾಮಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲನೆ, ಹಿಂಪಡೆಯುವ ಪ್ರಕ್ರಿಯೆಗಳು ನಡೆದವು. ಶಾಸಕರು, ಸಂಸದರು, ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿರಾಜಪೇಟೆ ಪುರಸಭೆಯ 18 ವಾರ್ಡ್‌ಗಳ ಚುನಾಯಿತ ಪ್ರತಿನಿಧಿಗಳಿಂದ ಒಟ್ಟು 21 ಮತಗಳು ಚುನಾವಣೆಗೆ ಆರ್ಹವಾಗಿತ್ತು.
ಮತದಾನದ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಇಬ್ಬರು ನಾಮನಿರ್ದೆಶಿತ ಸದಸ್ಯರು ಮತ್ತು ಶಾಸಕರು ಸೇರಿದಂತೆ ಒಟ್ಟು 15 ಮತಗಳು ಲಭ್ಯವಾಯಿತು. ಬಿಜೆಪಿ ಅಭ್ಯರ್ಥಿಗಳ ಪರವಾಗಿ 6 ಮತಗಳು ಮಾತ್ರ ಚಲಾವಣೆಯಾದವು. ಕಾಂಗ್ರೆಸ್ ಅಭ್ಯರ್ಥಿಗಳು 9 ಮತಗಳ ಅಂತರದಿಂದ ಜಯಗಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಸುಮಾರು 15 ವರ್ಷಗಳ ಬಳಿಕ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿರುವುದು ಸಂತಸ ತಂದಿದೆ. ಯಾವುದೇ ಚುನಾವಣೆ ನಡೆದರೂ ಮತದಾನ ಮಾಡುವ ಹಕ್ಕು ಮತ್ತು ಕರ್ತವ್ಯವನ್ನು ಮರೆಯಬಾರದು. ಅದರೆ ಇಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಂಸದರಿಗೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಮತದಾನ ಮಾಡುವ ಹಕ್ಕು ಇದ್ದರೂ ಕರ್ತವ್ಯ ಮರೆತಿರುವುದು ಸಂವಿಧಾನಕ್ಕೆ ಮಾಡಿರುವ ಅಪಮಾನ ಎಂದು ವಿಷಾದ ವ್ಯಕ್ತಪಡಿಸಿದರು.
ವಿರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ಪುರಸಭೆಗೆ ಮೇಲ್ದರ್ಜೆಗೆ ಏರಿದೆ. ಚುನಾಯಿತ ಜನಪತ್ರಿನಿಧಿಗಳು ವಿರಾಜಪೇಟೆ ನಗರದ ಅಭಿವೃದ್ಧಿಗೆ ಒತ್ತು ನೀಡಿ ತನ್ನ ಕರ್ತವ್ಯ ನಿರ್ವಹಿಸಬೇಕು ಎಂದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕಿವಿ ಮಾತು ಹೇಳಿದರು.
ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಸರ್ಕಾರದ ನಾಮ ನಿರ್ದೇಶಿತ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರುಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದರು