ಸಂಸಾರದ ನೆಮ್ಮದಿಗೆ ಮಹಿಳೆಯರ ತಾಳ್ಮೆ ಅತ್ಯಗತ್ಯ

20mdkd1 - Copy
Published on

ವಿಜಯವಾಣಿ ಸುದ್ದಿಜಾಲ ವಿರಾಜಪೇಟೆ

ಮಹಿಳೆಯರು ಸಮಾಧಾನದಿಂದ ಇದ್ದಲ್ಲಿ ಸಂಸಾರ ಚನ್ನಾಗಿರುತ್ತದೆ. ಆದ್ದರಿಂದ ಮಹಿಳೆಯರಿಗೆ ತಾಳ್ಮೆ ಮುಖ್ಯ ಎಂದು ಅಂತಾರಾಷ್ಟ್ರೀಯ ಅಥ್ಲೆಟ್ ತೀತಮಾಡ ಅರ್ಜುನ್ ದೇವಯ್ಯ ಹೇಳಿದರು.

ವಿರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಕೂಟ ಆಶ್ರಯದಲ್ಲಿ ಮಂಗಳವಾರ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿ ಸಿದ್ದ ಪುತ್ತರಿ ಊರೊರ್ಮೆಯಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಂಸ್ಕಾರ ಮತ್ತು ಸಂಸ್ಕೃತಿ ಇದ್ದಲ್ಲಿ ಮಾತ್ರ ಒಂದು ಜನಾಂಗ ಉಳಿಯಲು ಸಾಧ್ಯವೆಂದರು.

ಸಂಸ್ಕಾರ, ಸಂಸ್ಕೃತಿ ಬಿಟ್ಟಿದ್ದರಿಂದ ಹಲವಾರು ಜನಾಂಗಳು ನಿರ್ನಾಮವಾಗಿವೆ. ಗ್ರೀಕ್ ದೇಶ ನಾಶವಾಗಿದೆ. ಇದು ಪ್ರತಿಯೊಬ್ಬರಿಗೂ ಎಚ್ಚರಿಕೆ ಗಂಟೆಯಾಗಬೇಕು. ಸಂಸ್ಕಾರ, ಸಂಸ್ಕೃತಿ ಹಣದಿಂದ ಬರುವುದಿಲ್ಲ. ವೈಯುಕ್ತಿಕವಾಗಿ ಬೆಳವಣಿಗೆಯೊಂದಿಗೆ ಸಮಾಜದ ಬೆಳವಣಿಗೆಯಲ್ಲಿ ಯೂ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.

ನದಿಯಲ್ಲಿ ಅವೈಜ್ಞಾನಿಕವಾಗಿ ಮರಳು ತೆಗೆಯುತ್ತಿರುವುದು, ಮರಗಿಡಗಳನ್ನು ಕಡಿಯುತ್ತಿರುವುದು, ಭತ್ತದ ಕೃಷಿಯಿಂದ ವಿಮುಖವಾಗಿರು ವುದರಿಂದ ಜಲಮೂಲಕ್ಕೆ ಧಕ್ಕೆಯಾಗುತ್ತಿದೆ. ಇದು ಕೊಡಗಿಗೆ ಮಾರಕವಾಗಿ ದುಷ್ಪರಿಣಾಮ ಉಂಟು ಮಾಡುತ್ತಿದೆ ಎಂದು ಅರ್ಜುನ್ ದೇವಯ್ಯ ಕಳವಳ ವ್ಯಕ್ತ ಪಡಿಸಿದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ವಕೀಲ ಮೇರಿಯಂಡ ಕೆ. ಪೂವಯ್ಯ ಮಾತನಾಡಿ, ಕೊಡವ ಸಂಸ್ಕೃತಿಗೆ ಸಾವಿರ ವರ್ಷದ ಇತಿಹಾಸವಿದೆ. ಕೊಡವ ಸಂಸ್ಕೃತಿಗೆ ಸರಿಸಾಟಿಯಾದ ಮತ್ತೊಂದು ಸಂಸ್ಕೃತಿ ಇಲ್ಲ ಎಂದು ಅಭಿಮಾನ ವ್ಯಕ್ತ ಪಡಿಸಿದರು. ಮತ್ತೊಂದು ಜನ್ಮ ಇದ್ದಲ್ಲಿ ಕೊಡವನಾಗಿ ಜನಿಸಲು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಕೊಡವರು ಹಾಗೂ ಕೊಡಗಿಗೆ ತೊಂದರೆಯಾಗುವ ವಿಷಯಗಳ ವಿರುದ್ಧ ಕೊಡವ ಪೊಮ್ಮಕ್ಕಡ ಒಕ್ಕೂಟ ಪ್ರತಿರೋಧ ವ್ಯಕ್ತ ಪಡಿಸಲು ಸಜ್ಜಾಗಿದೆ. ಕೊಡವರ ಸ್ವಾಭಿಮಾನ, ಪ್ರತಿಷ್ಠೆಗೆ ಧಕ್ಕೆವುಂಟಾದ್ದಲ್ಲಿ ಅದನ್ನು ಸಹಿಸುವುದಿಲ್ಲ. ಕೊಡವರು ಗೋಮಾಂಸ ತಿನ್ನುತ್ತಾರೆಂದು ಹೇಳಿದ ಮಾಜಿ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಕೊಡವ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಹೇಳಿದರು.

ಪ್ರಕೃತಿ ವಿಕೋಪ, ಕೋವಿಡ್ ಸಂಕಷ್ಟದ ವೇಳೆ ಸಂಕಷ್ಟಕ್ಕೆ ಸಿಲುಕಿದವರಿಗೆ ತಮ್ಮ ಇತಿಮಿತಿ ಒಳಗೆ ಸಹಾಯ ಮಾಡಿದ್ದೇವೆ. ಮಹಿಳೆಯರಿಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ತೀತಮಾಡ ಅರ್ಜುನ್ ದೇವಯ್ಯ, ಮೇರಿಯಂಡ ಕೆ. ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತೀತಮಾಡ ದಿವ್ಯಾ ಅರ್ಜುನ್, ಕೂಟದ ಉಪಾಧ್ಯಕ್ಷೆ ಅಮ್ಮಣಿಚಂಡ ಈಶ್ವರಿ ಚಂಗಪ್ಪ, ಖಜಾಂಚಿ ತಾತಂಡ ಯಶು ಕಬೀರ್, ಸಹಕಾರ್ಯದರ್ಶಿ ಮಾಳೇಟಿರ ಕವಿತಾ ಶ್ರೀನಿವಾಸ್, ಸಲಹೆಗಾರ್ತಿ ಬಿದ್ದಂಡ ರಾಣಿ, ಬೋಜಕ್ಕ ಗ್ರೂಪ್ ನಾಯಕಿ ಮಾಳೇಟಿರ ಸ್ವಾತಿ ಇದ್ದರು. ಒಕ್ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net