ಬಾಡಿಗೆ ಇಲ್ಲದೆ ಬಾಡಿದ ಬದುಕು

thotti jeep nildhana
Published on

ಪಳೆಯಂಡ ಪಾರ್ಥಚಿಣ್ಣಪ್ಪ ವಿರಾಜಪೇಟೆ

ಬ್ಯಾಂಕ್/ ಹಣಕಾಸು ಸಂಸ್ಥೆಗಳಿಂದ ಸಾಲ ಮಾಡಿ ವಾಹನ ಖರೀದಿಸಿದ್ದೇವೆ. ಆದರೆ, ನಮಗೆ ಸೂಕ್ತ ಬಾಡಿಗೆ ಸಿಗದೆ ಬದುಕು ಸಾಗಿಸಲು ಕಷ್ಟಕರವಾಗುತ್ತಿದೆ ಎಂದು ಬಾಡಿಗೆಗೆ ವೃತ್ತಿ ನಡೆಸುತ್ತಿರುವ ಲಘು ವಾಹನ ಮಾಲೀಕರು/ ಚಾಲಕರು ಅಸಹಾಯಕತೆ ವ್ಯಕ್ತ ಪಡಿಸುತ್ತಿ
ದ್ದಾರೆ.

ಕನ್ನಡದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ಶುಕ್ರವಾರ ಆಯೋಜಿಸಿದ್ದ ಕಾಯಕ ಸಮಾಜ ಸಂವಾದದಲ್ಲಿ ತಮ್ಮ ಸಂಕಷ್ಟ ತೆರೆದಿಟ್ಟರು. ಬಾಡಿಗೆ ವಾಹನ ಚಾಲಕರೆಂದರೆ ಜನರಲ್ಲಿ ಅದೇನೋ ತಾತ್ಸಾರ. ಜು ನಮ್ಮನ್ನು ನೋಡುವ ದೃಷ್ಠಿಯೇ ಬೇರೆ. ನಾವು ಕೂಡ ಎಲ್ಲ ರೊಂದಿಗೆ ಬೆರೆಯಲು ಪ್ರಯತ್ನಿಸಿದರೂ ನಮ್ಮದೆ ಆದ ಒಂದು ಗುಂಪು. ನಮಗೆ ಆ ರೀತಿಯಲ್ಲಿ ಆಗುತ್ತದೋ ಅಥವಾ ಸಮಾಜವೇ ನಮ್ಮನ್ನು ಆ ರೀತಿಯಾಗಿ ನೋಡುತ್ತಿದಯೋ ಗೊತ್ತಿಲ್ಲ. ಜೀವನ ನಿರ್ವಹಣೆಗೆ ಲಘು ವಾಹನ ತೆಗೆದುಕೊಂಡಿದ್ದೇವೆ. ಬಾಡಿಗೆ ಇಲ್ಲದೆ, ಮಾರಾಟ ಮಾಡಲು ಆಗದ ಪರಿಸ್ಥಿತಿ ಇದೆ.

ಚಾಲಕರಲ್ಲಿ ಬಹುತೇಕರು ವಿದ್ಯಾವಂತರೆ. ನಿರುದ್ಯೋಗ ಸಮಸ್ಯೆಯಿಂದಾಗಿ ತೊಟ್ಟಿ ಜೀಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ.
ನಮಗೆ ವಾಹನ ನಿಲ್ಲಿಸಲು ನಿಲ್ದಾಣವಿಲ್ಲ. ಹಿಂದೆ ಪಿಡ್ಲೂಡಿ ಕಚೇರಿ ಮುಂದೆ ನಿಲುಗಡೆಗೆ ಅವಕಾಶ ಇತ್ತು, ಸಾರ್ವಜನಿಕರಿಗೆ ಉಪಯೋಗ ಆಗಲೆಂದು ನಮ್ಮನ್ನು ಎತ್ತಂಗಡಿ ಮಾಡಿಸಿದರು. ಆ ಸ್ಥಳ ಈಗ ಬ್ಯಾಂಕ್, ಎಲ್‌ಐಸಿ, ಖಾಸಗಿ ಹಣಕಾಸು ಸಂಸ್ಥೆ ಸಿಬ್ಬಂದಿ ನಿಲ್ದಾಣವಾಗಿದೆ.

ಕರೊನಾ ಸಂದರ್ಭ ೬ ತಿಂಗಳು ಯಾವುದೇ ಕೆಲಸವಿಲ್ಲದೆ ಮನೆಯಲ್ಲಿಯೆ ಕೂರುವ ಪರಿಸ್ಥಿತಿ ಎದುರಾಗಿತ್ತು. ಕೆಲವು ಸಂಘ ಸಂಸ್ಥೆಗಳು ಸ್ಪಲ್ಪ ಮಟ್ಟಿಗೆ ಆರ್ಥಿಕ ನೆರವಿನೊಂದಿಗೆ ಆಹಾರ ಕಿಟ್ ನೀಡಿದರು. ಆದರೆ, ಸರ್ಕಾರ ಯಾವುದೇ ನೆರವು ಬಂದಿಲ್ಲ. ನಂತರದ ದಿನಗಳಲ್ಲಿ ನಮ್ಮ ಪರಿಸ್ಥಿತಿ ಸುಧಾರಿಸಲಿಲ್ಲ. ಬಹುತೇಕ ತೋಟ ಮಾಲೀಕರಲ್ಲಿ ತೊಟ್ಟಿ, ಪಿಕ್‌ಅಪ್ ಜೀಪು ಇರುವುದರಿಂದ ನಮ್ಮನ್ನು ಬಾಡಿಗೆಗೆ ಕರೆಯೊದು ಕಡಿಮೆ.

ಗಡಿ ಭಾಗವಾದ ಮಾಕುಟ್ಟ, ಕುಟ್ಟದಲ್ಲಿ ಆರ್‌ಟಿಒ ಚೆಕ್‌ಪೊಸ್ಟ್ ಇಲ್ಲದ ಕಾರಣ ಕೇರಳದ ಬಾಡಿಗೆ ವಾಹನಗಳು ಯಾವುದೇ ನಿಬರ್ಂಧ ಇಲ್ಲದೆ ಜಿಲ್ಲೆಯೊಳಗೆ ಪ್ರವೇಶಿಸುತ್ತಿದೆ. ಆರ್‌ಟಿಒ ಅಧಿಕಾರಿಗಳು ಇದ್ದಾರೋ ಇಲ್ಲವೊ ಎಂಬುದು ಗೊತ್ತಿಲ್ಲ. ನಾವೇನಾದರು ಹೆಚ್ಚಿಗೆ ಲೋಡ್ ಹಾಕಿಕೊಂಡರೆ ನಮ್ಮಿಂದ ದಂಡ ಕಟ್ಟಿಸಿಕೊಳ್ಳುತ್ತಾರೆ. ನಾವು ಕೇರಳ ರಾಜ್ಯಕ್ಕೆ ಹೋಗಬೇಕಾದರೆ ತಾತ್ಕಲಿಕ ಪರವಾನಿಗೆ ತೆಗೆದು ಕೊಂಡು ಹೋಗಬೇಕು. ನಮ್ಮಲ್ಲಿ ಆರ್‌ಟಿಓ ಚೆಕ್‌ಪೋಸ್ಟ್ ಇಲ್ಲದರಿಂದ ನಾವು ಕೇರಳಲ್ಲಿ ತೆರಿಗೆ ಕಟ್ಟಬೇಕು ನಮ್ಮ ಹಣ ಅವರ ಬೊಕ್ಕಸಕ್ಕೆ ಹೋಗುತ್ತಿದೆ. ಇದು ನಮ್ಮ ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಇಲ್ಲಿಂದ ನಾವು ಕೂಲಿ ಆಳುಗಳನ್ನು ಕರೆದುಕೊಂಡು ಹೋಗುವಂತಿಲ್ಲ. ಹೋದರು ಅಲ್ಲಿಯವರು ಗಾಡಿ ಅನ್‌ಲೋಡ್ ಆಗುವರೆಗೆ ಕಾದು ನಮ್ಮ ಹಣ ನಮಗೆ ಕೊಡಿ ಎಂದು ಕೇಳುತ್ತಾರೆ. ಇಂತಹ ಸಮಸ್ಯೆ ಯಾರು ಕೇಳುವಂತಿಲ್ಲ. ಇವೆಲ್ಲ ಸಮಸ್ಯೆ ಮುಂದಿಟ್ಟು ಜನರಿಂದ ಹಣ ಕೇಳಿದರೆ ಇಲ್ಲಿಯವರು ನಮ್ಮನ್ನು ಸುಲಿಗೆ ಮಾಡುತ್ತಾರೆ ಎಂಬ ಮಾತನ್ನು ಕೇಳಬೇಕು. ಒಟ್ಟಿನಲ್ಲಿ ನಮ್ಮ ಬದುಕು ಮೂರಾಬಟ್ಟೆಯಾಗಿದೆ.

**
ಜೀಪು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ತೈಲಬೆಲೆ ಏರಿಕೆ, ಬಿಡಿ ಭಾಗಗಳ ದರದ ಹೆಚ್ಚಳ ಹೊರೆಯಾಗುತ್ತಿದೆ. ಶೇ. ೯೦ ರಷ್ಟು ವಾಹನಗಳಿಗೆ ಸಾಲ ಇದೆ. ವಾಹನ ಬಾಡಿಗೆಗೆ ಓಡಿಸಿ, ಜೀವನ ನಿರ್ವಹಣೆ ಕಷ್ಟ ಸಾಧ್ಯ. ತಾತ್ಕಲಿಕ ಪರವಾನಿಗೆ ತೆಗೆದುಕೊಂಡು ಹೊರ ರಾಜ್ಯಗಳಿಗೆ ಹೋದರೆ ನಮಗೆ ಬಾಡಿಗೆ ಬರುವುದಿಲ್ಲ. ಸರ್ಕಾರ ಲಘು ವಾಹನ ಚಾಲಕರಿಗೆ ಪಿಂಚಣಿ ವ್ಯವಸ್ಥೆ ಕಲ್ಪಸಿಕೊಟ್ಟರೆ ಉತ್ತಮ.
ಎ.ಪಿ. ದಿನೇಶ್, ಅಧ್ಯಕ್ಷರು, ಲಘು ವಾಹನ ಚಾಲಕರು ಮತ್ತು ಮಾಲೀಕರ ಸಂಘ, ವಿರಾಜಪೇಟೆ.

**
ಬಾಡಿಗೆ ವಾಹನ ಓಡಿಸುವವರು ಸ್ಥಿತಿವಂತರೆನಲ್ಲ. ಲಕ್ಷಾಂತರ ರೂಪಾಯಿ ಸಾಲ ಮಾಡಿ ವಾಹನ ತೆಗೆದುಕೊಂಡು ಬಾಡಿಗೆಗೆ ಓಡಿಸುತ್ತಿ
ದ್ದೇವೆ. ಬಾಡಿಗೆ ಇಲ್ಲದೆ ಬರಿ ಕೈಯಲ್ಲಿ ಮನೆಗೆ ತೆರಳಿದ ದಿನ ಇದೆ. ವಾಹನ ಮಾರಾಟ ಮಾಡಲು ಆಗದೆ, ಸಾಲ ಮರುಪಾವತಿ ಮಾಡಲು ಆಗದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದೇವೆ. ಟಿ.ಎನ್. ಸುದರ್ಶನ್, ಬಾಡಿಗೆ ವಾಹನ ಚಾಲಕರು, ವಿರಾಜಪೇಟೆ.
**
ವಾರದಲ್ಲಿ ಒಂದೆರಡು ದಿನ ಬಾಡಿಗೆ ಸಿಗುತ್ತದೆ. ಕೇರಳ ನೋಂದಣಿ ಇರುವ ತೊಟ್ಟಿ ಜೀಪನ್ನು ತಂದು ೩ ತಿಂಗಳ ಅವಧಿಗೆ ವ್ಯವಹಾರ ನಡೆಸುತ್ತಿದ್ದಾರೆ. ಅದರಿಂದ ಸ್ಥಳೀಯ ಬಾಡಿಗೆ ವಾಹನಗಳಿಗೆ ತೊಂದರೆ ಆಗುತ್ತಿದೆ. ನಾವು ಕೇರಳಕ್ಕೆ ಬಾಡಿಗೆ ತೆರಳಿದರೆ ಅಲ್ಲಿ ನಮ್ಮನ್ನು ಕನಿಷ್ಠವಾಗಿ ನೋಡುತ್ತಾರೆ. ನಮ್ಮ ಜಿಲ್ಲೆಯಲ್ಲಿ ಯಾರು ಬೇಕಾದರು ವ್ಯವಹಾರ ನಡೆಸಬಹುದಾಗಿದೆ. ಬಿ.ಪಿ. ರಮೇಶ್, ಬಾಡಿಗೆ ವಾಹನ ಚಾಲಕರು, ವಿರಾಜಪೇಟೆ.

ಬ್ಯಾಂಕ್ ಹಾಗು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಾಹನ ಖರೀದಿಸಿ, ಬಾಡಿಗೆ ಇಲ್ಲದ ಕಾರಣ ತಮ್ಮ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ದುಡಿದ ಹಣ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಕಟ್ಟಲು ಸಾಧ್ಯವಿಲ್ಲ. ಯಾವಾಗ ನಮ್ಮ ವಾಹನ ಯಾವಾಗ ಎಳೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ. ವಾಹನ ನಿಲ್ಲಿಸಲು ನಿಲ್ದಾಣ ಇಲ್ಲದರಿಂದ ರಸ್ತೆ ಬದಿ ನಿಲ್ಲಿಸ ಬೇಕಾಗಿದೆ. ಎ.ಬಿ. ಈರಪ್ಪ, ಬಾಡಿಗೆ ವಾಹನ ಚಾಲಕರು, ವಿರಾಜಪೇಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net