

ಅಜ್ಜಮಾಡ ರಮೇಶ್ ಕುಟ್ಟಪ್ಪ ವಿರಾಜಪೇಟೆ
ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘದ ಆಡಳಿತ ಮಂಡಳಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ್ದಂತೆ ಸಹಕಾರ ಇಲಾಖೆ ಮಾರ್ಗಸೂಚಿ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಮಲಬಾರ್ ರಸ್ತೆಯಲ್ಲಿ ನಿರ್ಮಿಸಿರುವ ವಿವಾದಿತ ವಾಣಿಜ್ಯ ಕಟ್ಟಡಕ್ಕೆ ಸಂಬಂಧಿಸಿದ್ದಂತೆ ನಿಯಮ ಉಲ್ಲಂಘಿಸಿರುವುದು ತನಿಖಾ ಸಮಿತಿ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಹಕಾರ ಇಲಾಖೆ ಆದೇಶದಂತೆ ೧೦-೧-೨೦೧೩ ರ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿ ದ್ದರೂ ಆಡಳಿತ ಮಂಡಳಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮಾರ್ಗಸೂಚಿ ಪಾಲನೆ ಮಾಡಿಲ್ಲ ಎಂದು ವರದಿ ಮಾಡಿದ್ದಾರೆ.
೨.೬೨ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಅನುಮತಿ ಪಡೆದುಕೊಂಡು ೪.೬೦ ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಸಂಬಂಧ ಚೇಂದ್ರಿಮಾಡ ಗಣೇಶ್ ನಂಜಪ್ಪ, ಮಾದಂಡ ಎಸ್. ಪೂವಯ್ಯ, ಕಾಂಡಂಡ ಎಸ್. ಚರ್ಮಣ್ಣ ಅವರನ್ನೊಳಗೊಂಡ ತನಿಖಾ ಸಮಿತಿ ಸಮಗ್ರ ವರದಿ ಸಲ್ಲಿಸಿದೆ. ಸೆ.೨೨ ರಂದು ಬೆಳಗ್ಗೆ ೧೦.೩೦ ಗಂಟೆಗೆ ಆಯೋಜಿಸಿರುವ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಿವಾದಿತ ವಾಣಿಜ್ಯ ಕಟ್ಟಡ ಕುರಿತು ಗಂಭೀರ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಕರಾರು ಪತ್ರದಲ್ಲಿ ನಮೂದಿಸಿದ ಕೆಲಸ ಕಾರ್ಯ ಪಾಲಿಸದಿರುವುದು ಗುಣಮಟ್ಟ ಪರೀಕ್ಷೆಯಿಂದ ತಿಳಿದು ಬಂದಿದೆ. ಕಟ್ಟಡ ನಿರ್ಮಾಣಕ್ಕೆ ಕರೆಯಲಾಗಿದ್ದ ಟೆಂಡರ್ ರದ್ದು ಪಡಿಸಿ, ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಾಮಗ್ರಿ ಸಂಘದಿಂದಲೇ ಖರೀದಿಸಿ ನೀಡಲು ತೀರ್ಮಾನಿಸ ಲಾಗಿತ್ತು. ದರ ಪಟ್ಟಿಯಂತೆ ಕಾರ್ಮಿಕರ ವೇತನ ಪಾವತಿಸಲು ನಿರ್ಧರಿಸಲಾಗಿತ್ತು.
ಗುತ್ತಿಗೆದಾರ ಕೆ.ಎಸ್. ಕಾವೇರಪ್ಪ ಕಾಂಕ್ರಿಟ್ ಕೆಲಸಕ್ಕೆ ಮಾತ್ರ ದರ ಪಟ್ಟಿ ಸಲ್ಲಿಸಿದ್ದು, ದರ ಪಟ್ಟಿಯು ವೃತ್ತದ ದರ ಪಟ್ಟಿಗಿಂತ ಶೇ.೩೫ ರಷ್ಟು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ವೃತ್ತದ ದರ ಪಟ್ಟಿ ಪರಿಶೀಲಿಸದೆ ಕಾವೇರಪ್ಪಗೆ ಕಾಮಗಾರಿ ನೀಡಿರುವುದು ನಿಯಮಬಾಹಿರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಳತೆ ಪುಸ್ತಕದಲ್ಲಿ ಬರೆಯದೇ ಬಿಲ್ ಪಾವತಿಸಿರುವುದು ಇಂಜಿನಿಯರ್ ಮತ್ತು ಆಡಳಿತ ಮಂಡಳಿ ನಿರ್ಲಕ್ಷೃಕ್ಕೆ ಸಾಕ್ಷಿ. ಕಟ್ಟಡಕ್ಕೆ ಬೇಕಾದ ಸಾಮಗ್ರಿ ಬಗ್ಗೆಯಾಗಲೀ, ಕೆಲಸಕ್ಕೆ ತಗುಲಿದೆ ಕಾರ್ಮಿಕರ ವೆಚ್ಚದ ಬಗ್ಗೆಯಾಗಲೀ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ. ನಕಾಶೆಯಲ್ಲಿರು ವಂತೆ ೩೬ ಪಿಲ್ಲರ್ ಬದಲು ೨೬ ಪಿಲ್ಲರ್ ಮತ್ತು ಅದಕ್ಕೆ ಸೇರಿದ ಬೀಮ್‌ಗಳನ್ನು ಕೈಬಿಟ್ಟು ಕಟ್ಟಡ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ಆಕ್ಷೇಪ ವ್ಯಕ್ತ ಪಡಿಸಲಾಗಿದೆ.
ತಾಂತ್ರಿಕ ತಜ್ಞರ ದೃಢೀಕರಣ!
ಕಟ್ಟಡ ಕಾಮಗಾರಿಗೆ ೪.೬೦ ಕೋಟಿ ರೂ. ವೆಚ್ಚವಾಗಿರುವ ಬಗ್ಗೆ ತಾಂತ್ರಿಕ ತಜ್ಞ ಎಂ.ಕೆ. ಈರಪ್ಪ ಅಂತಿಮ ದರ ಪಟ್ಟಿ ನೀಡಿರುವುದು ಸಂಶಕ್ಕೆ ಎಡೆಮಾಡಿಕೊಟ್ಟಿದೆ. ಪಿಟ್ ಗುಂಡಿ ಹೊರತು ಪಡಿಸಿ ಸರ್ಕಾರದ ೨೦೧೮ ರ ದರ ಪಟ್ಟಿಯಂತೆ ೩.೩೨ ಕೋಟಿ ರೂ. ಖರ್ಚಾಗಿರುವ ಬಗ್ಗೆ ಇಂಜಿನಿಯರ್ ಕೆ.ಬಿ. ಪೊನ್ನಣ್ಣ ವರದಿ ನೀಡಿದ್ದಾರೆ. ಇಬ್ಬರು ತಾಂತ್ರಿಕ ತಜ್ಞರ ವರದಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಹುಣಸೂರಿನ ಮೌಲ್ಯಮಾಪಕರು ಭೂಮಿ ಸಮತಟ್ಟು ಮಾಡಲು ಮಾನವ ಕೂಲಿಯಂತೆ ೬.೮೦ ಲಕ್ಷ, ಪಿಲ್ಲರ್ ಗುಂಡಿ ತೆಗೆಯಲು ೨.೪೬ ಲಕ್ಷ, ಸಂಪು ನಿರ್ಮಾಣಕ್ಕೆ ೩.೬೦ ಲಕ್ಷ, ೩ನೇ ಅಂತಸ್ತು ಕಾಮಗಾರಿಗೆ ೨೫.೮೫ ಲಕ್ಷ ರೂ. ನಿಗದಿ ಪಡಿಸಿದ್ದಾರೆ. ಇಂಜಿನಿಯರ್ ಕೆ.ಬಿ. ಪೊನ್ನಣ್ಣ, ಜೆಸಿಬಿ ಮೂಲಕ ಮಣ್ಣು ಸಮತಟ್ಟು ಮಾಡಲು ೨೩ ಸಾವಿರ, ಪಿಲ್ಲರ್ ಗುಂಡಿ ತೆಗೆಯಲು ಮಾನವ ಕೂಲಿ ದರದಲ್ಲಿ ೮೫ ಸಾವಿರ ರೂ. ನಿಗದಿ ಪಡಿಸಿದ್ದಾರೆ. ಕಾಮಗಾರಿಗೆ ವಿನಿಯೋಗಿಸಿರುವ ಖರ್ಚು ವೆಚ್ಚದ ಮಾಹಿತಿ ಪ್ರಕಾರ ೨೨ ಲಕ್ಷ ರೂ. ವ್ಯತ್ಯಾಸ ಕಂಡು ಬಂದಿದೆ.
**
ವಾಣಿಜ್ಯ ಕಟ್ಟಡಕ್ಕೆ ಸಂಬಂಧಿಸಿದ್ದಂತೆ ಆಡಳಿತ ಮಂಡಳಿಗೆ ವರದಿ ಒಪ್ಪಿಸಲಾಗಿದೆ. ಮಹಾಸಭೆಯಲ್ಲಿ ಚರ್ಚಿಸಿದ ಬಳಿಕ ಕಾನೂನಿನ್ವಯ ಕ್ರಮ ತೆಗೆದುಕೊಳ್ಳಬೇಕು. ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸಿರುವುದಕ್ಕೆ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಿರುವ ಪ್ರತಿಯೊಬ್ಬರೂ ಜವಾಬ್ದಾರರಾಗುತ್ತಾರೆ. ಈಗ ತಪ್ಪಿಸಿಕೊಳ್ಳಲು ನಮಗೆ ಸಂಬಂಧವಿಲ್ಲ ಎಂದು ನಿರ್ದೇಶಕರಾಗಿದ್ದವರು ಹೇಳುವಂತಿಲ್ಲ. ಮಾದಂಡ ಎಸ್. ಪೂವಯ್ಯ, ತನಿಖಾ ಸಮಿತಿ ಸದಸ್ಯರು.
**
ಹನಿ ಸೊಸೈಟಿಯಲ್ಲಿ ಸೇರಿಕೊಂಡು ಗೋಲ್‌ಮಾಲ್ ಮಾಡುವುದಕ್ಕಿಂತ ಬೇರೆ ಕೆಲಸ ಮಾಡುವುದು ಒಳ್ಳೆಯದು. ಹಣ ಲೂಟಿ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ಜಿದ್ದಾಜಿದ್ದಿನ ಸ್ಪರ್ಧೆ ಮಾಡುತ್ತಾರೆಂಬ ಅನುಮಾನ ಮೂಡಿಸಿದೆ. ಹನಿ ಸೊಸೈಟಿ ಜೇನು ಕಳಪೆ ಗುಣಮಟ್ಟದೆಂದು ನನ್ನ ಮಗಳು ಗುರುತಿಸಿದ್ದಾಳೆ. ಒಂದು ಬಾಟಲಿ ಜೇನು ಹಾಕದವರೂ ಸೊಸೈಟಿ ಅಧ್ಯಕ್ಷರಾಗುತ್ತಾರೆ. ಮಚ್ಚಾರಂಡ ಬೋಪಣ್ಣ, ಜೇನು ಕೃಷಿಕರು, ಕಣ್ಣಂಗಾಲ.