ವಿರಾಜಪೇಟೆಗೆ ಜಿಲ್ಲಾಸ್ಪತ್ರೆ ಭಾಗ್ಯ

ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಹೊರ ನೋಟ.
ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಹೊರ ನೋಟ.
Published on

ವಿರಾಜಪೇಟೆ: ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ವಿಶೇಷ ಪ್ರಯತ್ನಕ್ಕೆ ಕೊನೆಗೂ ಫಲ ಲಭಿಸಿದ್ದು, ವಿರಾಜಪೇಟೆಯ ತಾಲೂಕು ಆಸ್ಪತ್ರೆ ಇನ್ನು ಮುಂದಕ್ಕೆ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದೆ.

ಆಸ್ಪತ್ರೆಯಲ್ಲಿ ಪ್ರಸ್ತುತ 105 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಮೇಲ್ದರ್ಜೆಗೇರಿರುವ ಪರಿಣಾಮ ಇದೀಗ 400 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಲಿದೆ. ಕಳೆದ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂಬಂಧ ಭರವಸೆ ನೀಡಿದ್ದರು. ಅದರಂತೆ ಈಗಾಗಲೇ ಕಟ್ಟಡ ಕಾಮಗಾರಿಗೆ ಸರ್ಕಾರ ಅನುಮೋದನೆಯನ್ನು ನೀಡಿದ್ದು, ಮೊದಲ ಹಂತದ ಕಾಮಗಾರಿಗೆ 95.60 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಮುಂದಿನ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಹೇಳಲಾಗುತ್ತಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ ಆರಂಭವಾದ ಹೆಗ್ಗಳಿಕೆ ವಿರಾಜಪೇಟೆ ತಾಲೂಕಿನದ್ದಾಗಿದೆ.

ಮೊದಲ ಹಂತದಲ್ಲಿ 250 ಹಾಸಿಗೆಗಳ ಮೇಲ್ದರ್ಜೆ ಕಾರ್ಯ ಶೀಘ್ರ ಆರಂಭವಾಗಲಿದ್ದು, ಕಾಮಗಾರಿಯ ಸಂಪೂರ್ಣ ರೂಪುರೇಷೆ ಸಿದ್ಧಗೊಂಡಿದೆ. ಮಡಿಕೇರಿಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜು ಆರಂಭವಾದಾಗಿನಿಂದ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಂಡಿದೆ. ವಿರಾಜಪೇಟೆಯ ತಾಲೂಕು ಆಸ್ಪತ್ರೆಯಲ್ಲಿಯೂ ಪ್ರಸ್ತುತವಾಗಿ ಹಲವಾರು ಸೌಲಭ್ಯಗಳು ಲಭ್ಯವಿದ್ದು, ಐಸಿಯು ಘಟಕ ಹಾಗೂ ಡಯಾಲಿಸಿಸ್ ಸೆಂಟರ್‌ನ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಪ್ರಸ್ತುತ ಘೋಷಿಸಿರುವ ಅನುದಾನದಲ್ಲಿ ಆಸ್ಪತ್ರೆ ಕಟ್ಟಡ, ವಸತಿಗೃಹ, ಸೇರಿದಂತೆ ಇನ್ನೂ ಅಗತ್ಯ ಕಾಮಗಾರಿಗಳನ್ನು ನಡೆಸುವುದರ ಜತೆಗೆ ಉಪಕರಣಗಳ ಖರೀದಿಗೂ ಕ್ರಮ ವಹಿಸಲಾಗಿದೆ.

ಸಾರ್ವಜನಿಕರಿಗೆ ಹೆಚ್ಚು ಅನುಕೂಲ: ವಿರಾಜಪೇಟೆ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೇರಿರುವುದರಿಂದ ಇಲ್ಲಿನ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಕಾಣಲಿದೆ. ವಿರಾಜಪೇಟೆ ಪುರಸಭೆಯಾಗಿದ್ದು, ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಬುಡಕಟ್ಟು ಹಾಗೂ ಕಾರ್ಮಿಕರು ವಾಸಿಸುತ್ತಿದ್ದಾರೆ. ಗ್ರಾಮಗಳ ತೋಟದ ಲೈನ್‌ಮನೆಗಳಲ್ಲಿ ಕೂಲಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಪಟ್ಟಣ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತಾಲೂಕು ಆಸ್ಪತ್ರೆ ಆಸರೆಯಾಗಿದೆ. ಆರೋಗ್ಯದಲ್ಲಿ ಅಲ್ಪ ಗಂಭೀರ ಸಮಸ್ಯೆ ಕಂಡರೂ ಚಿಕಿತ್ಸೆ ಪಡೆಯಲು ಮಡಿಕೇರಿಗೆ ತೆರಳುವ ಅನಿವಾರ್ಯತೆ ಇತ್ತು. ಇದೀಗ ವಿರಾಜಪೇಟೆಯಲಿಯೇ ಹೆಚ್ಚಿನ ಸೇವೆ ಲಭ್ಯವಾದರೆ ನಿಜವಾಗಿಯೂ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ.

ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಹಾಗೂ ಹೊರ ಜಿಲ್ಲೆಗಳಿಗೆ ತೆರಳುತ್ತಿದ್ದ ಜನರಿಗೆ ವಿರಾಜಪೇಟೆಯಲ್ಲಿ ಚಿಕಿತ್ಸೆ ಲಭಿಸುವ ಆಶಾಭಾವನೆ ಮೂಡಿದೆ. ತಜ್ಞ ವೈದ್ಯರು, ಆಡಳಿತ ಅಧಿಕಾರಿಗಳು, ನರ್ಸ್‌ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಸಂಖ್ಯೆ ಅಧಿಕವಾಗಲಿದೆ. ಇದರಿಂದ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಎಲ್ಲ ರೀತಿಯ ಚಿಕಿತ್ಸೆಯು ಲಭಿಸಲಿದೆ. ಮಾತ್ರವಲ್ಲದೆ ವಿಶೇಷವಾಗಿ ಬಡವರ್ಗದ ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೇಕಾದ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳು ದೊರಕಲಿದೆ. ಹೋಟೆಲ್, ಹಣ್ಣಿನ ಅಂಗಡಿ ಮತ್ತಿತರ ಸಣ್ಣ, ಮಧ್ಯಮ ಪ್ರಮಾಣದ ವ್ಯಾಪಾರ, ಹೊಸದಾಗಿ ಆಸ್ಪತ್ರೆಯ ಅಸುಪಾಸಿನಲ್ಲಿ ವ್ಯಾಪಾರ ಆರಂಭಿಸುವವರಿಗೆ ಉಪಯುಕ್ತ ಆಗಲಿದೆ.

ವಿರಾಜಪೇಟೆಯ ಸಾರ್ವಜನಿಕ ಆಸ್ಪತ್ರೆ ಇನ್ನು ಮುಂದೆ ಜಿಲ್ಲಾಸ್ಪತ್ರೆಯ ಸ್ಥಾನಮಾನ ಪಡೆಯಲಿದೆ. 400 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ 95.6 ಕೋಟಿ ರೂ. ವೆಚ್ಚದಲ್ಲಿ 250 ಹಾಸಿಗೆಗಳ ಮೇಲ್ದರ್ಜೆ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನೂ ನಡೆಸಲಾಗುವುದು. ಆಸ್ಪತ್ರೆಯಲ್ಲಿ ಜನರಿಗೆ ಬೇಕಾದಂತ ಎಲ್ಲ ಆಧುನಿಕ ಸೌಲಭ್ಯಗಳು ದೊರಕಲಿದ್ದು, ಈ ಕಾಮಗಾರಿಗೆ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಚುನಾವಣಾ ಪ್ರಚಾರದಲ್ಲಿ ನೀಡಿದ ಭರವಸೆಯಂತೆ ವಿರಾಜಪೇಟೆ ಆಸ್ಪತ್ರೆ ಅಭಿವೃದ್ಧಿಗೆ ಅನುದಾನವನ್ನು ತಂದಿದ್ದು, ಮೇಲ್ದರ್ಜೆಗೆ ಏರಿಸುವ ಕಾಮಗಾರಿಗಳ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಮಾಡಲಾಗುವುದು.

ಎ.ಎಸ್.ಪೊನ್ನಣ ್ಣಶಾಸಕ, ವಿರಾಜಪೇಟೆ ಕ್ಷೇತ್ರ

ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಬೇಕು ಎಂಬುದು ತಾಲೂಕಿನ ಜನರ ಹಲವು ದಶಕಗಳ ಕನಸಾಗಿತ್ತು. ತುರ್ತು ಚಿಕಿತ್ಸೆಗಾಗಿ ಹಲವು ಸಂದರ್ಭದಲ್ಲಿ ಕಷ್ಟಪಟ್ಟು ಮಡಿಕೇರಿ ಜಿಲ್ಲಾಸ್ಪತ್ರೆ ಅಥವಾ ಮೈಸೂರಿಗೆ ಕರೆದೊಯ್ಯವ ಸ್ಥಿತಿ ಇತ್ತು. ಇನ್ನು ಮುಂದೆ ತಾಲೂಕಿನಲ್ಲೇ ಹೆಚ್ಚಿನ ಆರೋಗ್ಯ ಸೇವೆ ದೊರೆಯಲಿದ್ದು, ಇದಕ್ಕಾಗಿ ಶಾಸಕರಿಗೆ ತಾಲೂಕಿನ ಜನರ ಪರವಾಗಿ ಧನ್ಯವಾದ. ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿರುವುದರಿಂದ ಆರೋಗ್ಯ ಸೇವೆ ಮಾತ್ರವಲ್ಲದೆ ವಿವಿಧ ರೀತಿಯ ವ್ಯಾಪಾರ, ಜೀವನೋಪಾಯ ವೃದ್ಧಿಯ ವಿವಿಧ ಮಾರ್ಗ ಆರಂಭವಾಗಿ ಉದ್ಯೋಗ ನಿರ್ಮಾಣವಾಗಲಿದೆ.

ದೇಚಮ್ಮ ಕಾಳಪ್ಪ ಅಧ್ಯಕ್ಷೆ, ವಿರಾಜಪೇಟೆ ಪುರಸಭೆ

ಇದು ವಿರಾಜಪೇಟೆ ತಾಲೂಕಿನ ಜನಸಾಮಾನ್ಯರ ಬಹಳ ದಿನದ ಕನಸಾಗಿತ್ತು. ಇಲ್ಲಿನ ಜನರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಮಡಿಕೇರಿ ಅಥವಾ ಮೈಸೂರಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಇದೀಗ ಶಾಸಕರ ವಿಶೇಷ ಮುತುವರ್ಜಿಯಿಂದಾಗಿ ವಿರಾಜಪೇಟೆಯಲ್ಲಿ ಚಿಕಿತ್ಸೆ ಲಭಿಸುವ ಕಾರ್ಯ ಆರಂಭವಾಗಲಿದೆ. ಕುಟ್ಟ, ತಿತಿಮತಿಯಂತಹ ದೂರದ ಊರಿನ ಜನರಿಗೆ ಬಹಳ ಉಪಯುಕ್ತವಾಗಲಿದೆ. ಆದ್ದರಿಂದ ತಾಲೂಕಿನ ಎಲ್ಲ ಜನರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಡಿ.ಪಿ.ರಾಜೇಶ್ ಪದ್ಮನಾಭ ಪುರಸಭೆ ಸದಸ್ಯ, ವಿರಾಜಪೇಟೆ

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net