

ವಿರಾಜಪೇಟೆ: ಚೈತನ್ಯ, ಕ್ರಿಯಾಶೀಲತೆ, ಉತ್ಸಾಹ ಭರಿತ ಕಾರ್ಯಚಟುವಟಿಕೆಗಳು ಕಂಡು ಬರುವ ವೃದ್ಧರ ಸಹಕಾರದಿಂದ ಯುವಕರು ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಬಹುದು ಎಂದು ಇಲ್ಲಿನ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಟಿ.ಕೆ.ಬೋಪಯ್ಯ ಹೇಳಿದರು.
ಯೂತ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ಯುವಜನತೆ ಮತ್ತು ತಂಬಾಕು, ಸೇವಾ ಮನೋಭಾವ ಮತ್ತು ರಾಷ್ಟ್ರ ನಿರ್ಮಾಣ, ಯುವ ಜನತೆ ಮತ್ತು ಪ್ರಶ್ನೆಯ ಮಹತ್ವದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಹಾಗೂ ರಾಷ್ಟ್ರ ನಿರ್ಮಾಣದ ವಿಶೇಷ ಕಾಳಜಿ ಹೊಂದಿದ್ದ ಸ್ವಾಮಿ ವಿವೇಕಾನಂದ ಹಾಗೂ ಡಾ.ಸುಭಾಷ್ ಚಂದ್ರ ಬೋಸ್ ಅವರು ರಾಷ್ಟ್ರದ ಯುವ ಶಕ್ತಿಯನ್ನು ಬಳಸಿ ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಅಡಿಗಲ್ಲು ಹಾಕಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಈ ನಿಟ್ಟಿನಲ್ಲಿ ರಾಷ್ಟ್ರದ ಯುವ ಜನತೆಗೆ ಆಸಕ್ತಿಯನ್ನು ತುಂಬುವಂತೆ ಮಾಡಬೇಕು. ಈ ಇಬ್ಬರು ನಾಯಕರ ಆದರ್ಶ ಇಟ್ಟುಕೊಂಡು ಯುವಜನತೆ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಯುವ ಜನತೆ ಮಾದಕ ವಸ್ತುಗಳ ದುಶ್ಚಟದಿಂದ ದೂರವಿರುವ ಜತೆ ಸೇವಾ ಮನೋಭಾವ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಉಪನ್ಯಾಸಕರಾದ ಪ್ರೊ.ಅಂಕಿತ್‌ಕುಮಾರ್, ಪ್ರೊ.ಕೆ.ಜಿ.ರಮೇಶ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು. ಟ್ರಸ್ಟ್ ಅಧ್ಯಕ್ಷೆ ವಿ.ವಿನಿತಾ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿಬಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು.