ಇಂದು ಸಂಕೇತ್ ಕಾಂಗ್ರೆಸ್ ಸೇರ್ಪಡೆ

sanketh poovaiah - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಜಾತ್ಯಾತೀತ ಜನತಾದಳ ರಾಜ್ಯ ಕಾರ್ಯದರ್ಶಿ ಮೇರಿಯಂಡ ಸಂಕೇತ್ ಪೂವಯ್ಯ ಮಂಗಳವಾರ ಜೆಡಿಎಸ್‌ಗೆ ರಾಜೀನಾಮೆ ಸಲ್ಲಿಸಿದ್ದು, ಬುಧವಾರ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ.

ತಮ್ಮ ರಾಜೀನಾಮೆ ಪತ್ರವನ್ನು ಜೆಡಿಎಸ್ ವರಿಷ್ಠ ನಾಯಕರಾದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿಗೆ ಕಳುಹಿಸಿದ್ದಾರೆ. ತದನಂತರ ಮಾಜಿ ಸಚಿವ ಬಿ.ಎ. ಜೀವಿಜಯ ಅವರ ಮನೆಗೆ ತೆರಳಿ ಮಹತ್ವದ ಮಾತುಕತೆ ನಡೆಸಿದ್ದಾರೆ. ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಎ.ಎಸ್. ಪೊನ್ನಣ್ಣಗೆ ಬೆಂಬಲ ವ್ಯಕ್ತ ಪಡಿಸಿ, ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದು ವಿಶೇಷ.

ವಿರಾಜಪೇಟೆ ಸೆರಿನಿಟಿ ಹಾಲ್‌ನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಗ್ಗೆ ೧೧ ಗಂಟೆಗೆ ಆಯೋಜಿಸಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳ ಲಿದ್ದಾರೆ.

ಕಳೆದ ಬಾರಿ ಸಂಕೇತ್ ಪೂವಯ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದರ ಮೂಲಕ ೧೧ ಸಾವಿರ ಮತ ಪಡೆದಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದ ಅವರ ಹಲವು ವಿದ್ಯಮಾನಗಳಿಂದ ಬೇಸರತ್ತು ರಾಜಕೀಯವಾಗಿ ಒಂದಿಷ್ಟು ತಟಸ್ಥರಾಗಿದ್ದರು.

ಕೆಲವು ತಿಂಗಳ ಹಿಂದೆ ತನ್ನ ಪುತ್ರನ ನಿಶ್ಚಿತಾರ್ಥಕ್ಕೆ ಕೊಡಗಿಗೆ ಆಗಮಿಸಿದ್ದ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗಿನ ಮಾತುಕತೆ ಬಳಿಕ ಜೆಡಿಎಸ್ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಇದರೊಂದಿಗೆ ರಾಜ್ಯ ವಕ್ತಾರ ಜವಾಬ್ದಾರಿಯೊಂದಿಗೆ ಮೈಸೂರು, ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ವಹಿಸಲಾಗಿತ್ತು.

೨೫ ವರ್ಷದಿಂದ ರಾಜಕೀಯದಲ್ಲಿರುವ ತಾನು ಅಧಿಕಾರದ ಹಿಂದೆ ಹೋಗಲಿಲ್ಲ. ಜಯಪ್ರಕಾಶ್ ನಾರಾಯಣ ಸಿದ್ಧಾಂತದಲ್ಲಿ ವಿಶ್ವಾಸ ಹೊಂದಿದ್ದು, ಜಾತ್ಯಾತೀತ ಮತ ವಿಭಜನೆ ಆಗಬಾರದೆಂಬ ಕಾರಣಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ವಿರಾಜಪೇಟೆ ಕ್ಷೇತ್ರ ಜನತೆ ಬದಲಾವಣೆ ಬಯಸಿದ್ದು, ಎ.ಎಸ್. ಪೊನ್ನಣ್ಣಗೆ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಸಂಕೇತ್ ಪೂವಯ್ಯ ಹೇಳಿದ್ದಾರೆ.

ಬುಧವಾರ ಆಯೋಜಿಸಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಉಪಾಧ್ಯಕ್ಷ ವಿನಯಕುಮಾರ್ ಸೊರಕೆ ಪಾಲ್ಗೊಳ್ಳಲಿದ್ದಾರೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net